Home ಕ್ರೀಡೆ ICC Rankings: ಸಿರಾಜ್, ಜೈಸ್ವಾಲ್‌ಗೆ ಬಡ್ತಿ, ಟಾಪ್ 10ನಿಂದ ಗಿಲ್​ ಔಟ್

ICC Rankings: ಸಿರಾಜ್, ಜೈಸ್ವಾಲ್‌ಗೆ ಬಡ್ತಿ, ಟಾಪ್ 10ನಿಂದ ಗಿಲ್​ ಔಟ್

0

ದುಬೈ: ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಿನ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿ ಬಳಿಕ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟವಾಗಿದ್ದು, ಟೀಮ್‌ ಇಂಡಿಯಾ ಆಟಗಾರರ ಶ್ರೇಯಾಂಕದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.

ಈ ಪಟ್ಟಿಯಲ್ಲಿ ವೇಗಿ ಮೊಹಮದ್ ಸಿರಾಜ್ ಗಣಿನೀಯ ಏರಿಕೆ ಕಂಡಿದ್ದು, ಯಶಸ್ವಿ ಜೈಸ್ವಾಲ್‌ ಕೂಡ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆದರೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ನಾಯಕ ಶುಭ್‌ಮನ್ ಗಿಲ್ 13ನೇ ಸ್ಥಾನಕ್ಕೆ ಕುಸಿದಿದ್ದರೆ, ರಿಷಭ್ ಪಂತ್ ಎಂಟನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಭಾರತದ ಮತ್ತೋರ್ವ ವೇಗಿ ಜಸ್ಪ್ರೀತ್‌ ಬುಮ್ರಾ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದು, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲಿಂಗ್‌ ವಿಭಾಗದಲ್ಲಿ 889 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ಬೌಲಿಂಗ್‌ ವಿಭಾಗದ ಬುಮ್ರಾ ಹೊರತುಪಡಿಸಿ ಟಾಪ್‌ ಟೆನ್‌ ಪಟ್ಟಿ ಭಾರತದ ಯಾವೊಬ್ಬ ಬೌಲರ್‌ ಕೂಡ ಸ್ಥಾನ ಪಡೆದಿಲ್ಲ. ರವೀಂದ್ರ ಜಡೇಜಾ ಟೆಸ್ಟ್ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಇದೇ ಸಾಲಿನಲ್ಲಿ ವಾಷಿಂಗ್ಟನ್ ಸುಂದರ್ 16 ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ಸರಣಿಯಲ್ಲಿ ಮೊಹಮದ್ ಸಿರಾಜ್ ಅದ್ಭುತ ಬೌಲಿಂಗ್‌ ನಡೆಸಿದ್ದಾರೆ. ತಮ್ಮ ಮಾರಕ ಬೌಲಿಂಗ್‌ ದಾಳಿಯಿಂದ ಆಂಗ್ಲರನ್ನು ರನ್‌ ಗಳಿಸಲು ಪರದಾಡುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ ಅಂತಿಮ ಪಂದ್ಯದ ಐದನೇ ದಿನದಲ್ಲಿ ಇಂಗ್ಲೆಂಡ್‌ ಗೆಲುವಿಗೆ ಕೇವಲ 35 ರನ್‌ ಅವಶ್ಯವಿದ್ದವು. ಭಾರತಕ್ಕೆ 4 ವಿಕೆಟ್‌ಗಳು ಬೇಕಿದ್ದವು. ಈ ಸಂದರ್ಭದಲ್ಲಿ ಸಿರಾಜ್‌ ಮೂರು ವಿಕೆಟ್‌ಗಳನ್ನು ಉರುಳಿಸಿ ಭಾರತಕ್ಕೆ ಜಯ ತಂದಿತ್ತರು.

ಒಟ್ಟಾರೆ ಇಂಗ್ಲೆಂಡ್‌ ಸರಣಿಯಲ್ಲಿ ಮೊಹಮ್ಮದ್‌ ಸಿರಾಜ್‌ ತಮ್ಮ ವೃತ್ತಿ ಜೀವನದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಈ ಮೊದಲು 27ನೇ ಸ್ಥಾನದಲ್ಲಿ ಸಿರಾಜ್‌ ಸದ್ಯ 674 ಅಂಕಗಳೊಂದಿಗೆ 12 ಸ್ಥಾನಗಳ ಏರಿಕೆ ಕಾಣುವ ಮೂಲಕ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲಿಂಗ್‌ ವಿಭಾಗದಲ್ಲಿ 15ನೇ ಸ್ಥಾನದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್‌ ಕೂಡ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನಡೆಸಿದ್ದಾರೆ. ಈ ಮೂಲಕ ಅವರು 792 ಅಂಕಗಳೊಂದಿಗೆ ಮೂರು ಸ್ಥಾನಗಳ ಏರಿಕೆ ಕಂಡಿದ್ದು, ಬ್ಯಾಟಿಂಗ್‌ ವಿಭಾಗದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಆದರೆ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ 725 ಅಂಕಗಳನ್ನು ಪಡೆದಿದ್ದು, ಟಾಪ್‌ ಟೆನ್‌ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬ್ಯಾಟಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ ಜೋ ರೂಟ್ ಮೊದಲ ಸ್ಥಾನದಲ್ಲಿದ್ದರೆ, ಮತ್ತೋರ್ವ ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ 124 ಅಂಕದೊಂದಿಗೆ ಅಗ್ರ ಸ್ಥಾನವನ್ನು ಪಡೆದಿದ್ದು, ದಕ್ಷಿಣ ಆಫ್ರಿಕಾ 115 ಅಂಕಗಳೊಂದಿಗೆ ದ್ವಿತೀಯ, ಇಂಗ್ಲೆಂಡ್ 112 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿವೆ. ಭಾರತ ತಂಡ 107 ಅಂಕಗಳನ್ನು ಹೊಂದಿದ್ದು, 4ನೇ ಸ್ಥಾನವನ್ನು ಪಡೆದುಕೊಂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version