ನವದೆಹಲಿ: ಮಹಿಳಾ ಕ್ರಿಕೆಟ್‌ಗೆ ಹೊಸ ಇತಿಹಾಸ ಬರೆಯುವಂತ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟಿಸಿದೆ. ಸೆಪ್ಟೆಂಬರ್ 30ರಿಂದ ನವೆಂಬರ್ 2ರವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ (Women’s World Cup 2025) ಟೂರ್ನಿಗೆ ದಾಖಲೆಯ ₹122.56 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಲಾಗಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಈ ಕುರಿತಂತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಹಿಂದಿನ ವಿಶ್ವಕಪ್ ಬಹುಮಾನ ಮೊತ್ತಕ್ಕಿಂತ 297% ಹೆಚ್ಚಾಗಿದೆ ಎಂದು ತಿಳಿಸಿದರು. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟಿಗರಿಗೆ ಇಷ್ಟು ದೊಡ್ಡ ಮೊತ್ತದ ಬಹುಮಾನವನ್ನು ಮೀಸಲಾಗಿಸಲಾಗಿದೆ.
ಹಿಂದಿನ ವಿಶ್ವಕಪ್‌ನೊಂದಿಗೆ ಹೋಲಿಕೆ: 2022ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಒಟ್ಟು ₹30.87 ಕೋಟಿ ಬಹುಮಾನ ಮೊತ್ತ ಘೋಷಿಸಲಾಗಿತ್ತು. ಅದೇ ಮೊತ್ತವನ್ನು ಈ ಬಾರಿ ನಾಲ್ಕು ಪಟ್ಟು ಹೆಚ್ಚಿಸಿ ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ತೇಜನ ನೀಡಲಾಗಿದೆ.
ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ಪ್ರೇರಣೆ : ಮಹಿಳಾ ಏಕದಿನ ವಿಶ್ವಕಪ್ ಬಹುಮಾನ ಕುರಿತಂತೆ ಜಯ್ ಶಾ ಮಾತನಾಡಿ ಮಹಿಳಾ ಕ್ರಿಕೆಟ್ ಇಂದಿನ ದಿನಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ವಿಶ್ವದಾದ್ಯಂತ ಆಕರ್ಷಿಸುತ್ತಿದೆ. ಅವರ ಪರಿಶ್ರಮ, ಸಮರ್ಪಣೆ ಮತ್ತು ಸಾಧನೆಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ಟೂರ್ನಿಯ ಆತಿಥ್ಯ: ಮಹಿಳಾ ಏಕದಿನ ವಿಶ್ವಕಪ್ 2025 ಭಾರತದಲ್ಲಿ ನಡೆಯಲಿದ್ದು, ಆತಿಥೇಯ ರಾಷ್ಟ್ರವಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಸಿದ್ಧತೆ ನಡೆಸುತ್ತಿದೆ. ಭಾರತದಲ್ಲಿ ವಿಶ್ವಕಪ್ ಆಯೋಜನೆ ಕ್ರಿಕೆಟ್ ಅಭಿಮಾನಿಗಳಿಗೆ ಮಹೋತ್ಸವವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
