Home ಸಂಪಾದಕೀಯ ಸಂಪಾದಕೀಯ: ಶಾಲೆಗೆ ಮನೋವೈದ್ಯ, ಮನೆಗೆ ಅಜ್ಜಿ-ತಾತ ಬೇಕು

ಸಂಪಾದಕೀಯ: ಶಾಲೆಗೆ ಮನೋವೈದ್ಯ, ಮನೆಗೆ ಅಜ್ಜಿ-ತಾತ ಬೇಕು

0

ಸಂಯುಕ್ತ ಕರ್ನಾಟಕ ಪತ್ರಿಕೆ ಗುರುವಾರದ ಸಂಪಾದಕೀಯ

ಈಗ ಎಲ್ಲ ಕಡೆ ಮಕ್ಕಳ ಆತ್ಮಹತ್ಯೆ ಅಧಿಕಗೊಳ್ಳುತ್ತಿದೆ. ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದು ಸಣ್ಣ ವಿಷಯಗಳಿಗೆ ಮನನೊಂದು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಿದೆ. ಪ್ರತಿ ಶಾಲೆಯಲ್ಲಿ ಒಬ್ಬರು ಮನೋವೈದ್ಯರನ್ನು ನೇಮಿಸಿಕೊಳ್ಳುವುದು ಅಗತ್ಯ ಎಂದು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ನಿಮ್ಹಾನ್ಸ್‌ನಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ 1 ಲಕ್ಷ ಜನ ಇದರ ನೆರವು ಪಡೆದುಕೊಂಡಿದ್ದಾರೆ.

ಕೊರೊನಾ ಕಳೆದ ಮೇಲೆ ಯುವ ಪೀಳಿಗೆಯಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶೇ. 15 ಪ್ರಕರಣಗಳಲ್ಲಿ ಇದು ಆತ್ಮಹತ್ಯೆಯ ಹಂತ ತಲುಪಿವೆ. ಸಹಾಯವಾಣಿಗೆ ರಾತ್ರಿ ವೇಳೆ ಹೆಚ್ಚಿನ ಕರೆಗಳು ಬರುತ್ತಿವೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ರೈಲ್ವೆಹಳಿಯವರೆಗೆ ಹೋಗಿ ಸಹಾಯವಾಣಿಗೆ ಫೋನ್ ಮಾಡಿ ಮನೆಗೆ ಹಿಂತಿರುಗಿದ ಘಟನೆ ನಡೆದಿವೆ. ಐಎಎಸ್, ಐಪಿಎಸ್ ಸೇರಿದಂತೆ ಹಲವು ತರಬೇತಿ ಸಂಸ್ಥೆಗಳು, ಐಐಟಿಗಳಲ್ಲಿ ಶೈಕ್ಷಣಿಕ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಅದಕ್ಕಾಗಿ ಈಗ ಪ್ರತಿ ಸಂಸ್ಥೆಯಲ್ಲೂ ಮನೋವೈದ್ಯರ ಸಲಹೆ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಸಮಸ್ಯೆ ಬಗೆಹರಿಸಬೇಕು ಎಂದರೆ ನಮ್ಮ ಪೂರ್ವಿಕರ ಪದ್ಧತಿಯನ್ನು ಪರಿಶೀಲಿಸುವುದು ಅಗತ್ಯ. ಕುಟುಂಬದ ಕಲ್ಪನೆ ಭಾರತೀಯರು ಇಡೀ ವಿಶ್ವಕ್ಕೆ ನೀಡಿದ್ದಾರೆ. ಬೇರೆ ಯಾವ ದೇಶದಲ್ಲೂ ಇದು ಇಲ್ಲ. ಕುಟುಂಬ ಎಂದರೆ ಮೂರು ತಲೆಮಾರಿನವರು ಒಂದೇ ಸೂರಿನಲ್ಲಿ ಬದುಕುವುದು. ಇದರಿಂದ ಬಹಳ ಅನುಕೂಲಗಳಿದ್ದವು. ಸಾವು ಸಂಭವಿಸಿದರೆ ಎಲ್ಲರೂ ಒಟ್ಟಿಗೆ ಎದುರಿಸುತ್ತಿದ್ದರು. ಆರ್ಥಿಕ ಸಮಸ್ಯೆ ಕೂಡ ಸಮನಾಗಿ ಹಂಚಿ ಹೋಗುತ್ತಿದ್ದವು.

ಕಾಲಕ್ರಮೇಣ ಇದು ಕೈಬಿಟ್ಟು ಹೋಯಿತು. ಜನಸಂಖ್ಯೆ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಕೂಡ ಚಿಕ್ಕ ಸಂಸಾರ ಎಂದು ಹೇಳಿ ಮೂರು ತಲೆಮಾರಿನ ಜನಜೀವನ ಕೈಬಿಟ್ಟು ಹೋಗುವಂತೆ ಆಯಿತು. ಈಗ ಚಿಕ್ಕ ಸಂಸಾರ ಎಂದರೆ ಗಂಡ-ಹೆಂಡತಿ, ಒಂದು ಅಥವಾ ಎರಡು ಮಕ್ಕಳು. ಉಳಿದವರು ಯಾರೂ ಇಲ್ಲ. ಹೀಗಾಗಿ ಮಕ್ಕಳಿಗೆ ಅಜ್ಜ-ಅಜ್ಜಿಯರ ಸಂಪರ್ಕ ತಪ್ಪಿಹೋಯಿತು. ಅಲ್ಲದೆ ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಮತ್ತಿತರ ಸಂಬಂಧಗಳು ಬಿಟ್ಟು ಹೋದವು.

ಈಗ ನಗರದಲ್ಲಿರುವ ಮಕ್ಕಳಿಗೆ ತಂದೆ-ತಾಯಿ ಹೊರತುಪಡಿಸಿದರೆ ಬೇರೆ ಯಾರನ್ನೂ ನೋಡೆ ಇರೋಲ್ಲ. ತಂದೆತಾಯಿ ಇಬ್ಬರೂ ಉದ್ಯೋಗಸ್ಥರಾದರೆ ಅವರಿಗೆ ಮಕ್ಕಳೊಂದಿಗೆ ಮಾತುಕತೆ ನಡೆಸಲು ಸಮಯವೇ ಸಿಗುವುದಿಲ್ಲ. ಹಿಂದೆ ಅಜ್ಜ-ಅಜ್ಜಿಯರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಅದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಹಿರಿಯರ ಜವಾಬ್ದಾರಿಯಾಗಿತ್ತು. ಹೀಗಾಗಿ ಮಕ್ಕಳಲ್ಲಿ ಖನ್ನತೆ, ಆತ್ಮಹತ್ಯೆ ಮನೋಭಾವ ಬರಲು ಅವಕಾಶವೇ ಇರಲಿಲ್ಲ.

ಪರೀಕ್ಷೆ ಸೋಲು-ಗೆಲುವು ಯಾವುದೂ ಪ್ರಮುಖವಾಗುತ್ತಿರಲಿಲ್ಲ. ಮಕ್ಕಳ ಊಟ ತಿಂಡಿಯಿಂದ ಹಿಡಿದು ಅವರು ಮಲಗುವವರೆಗೆ ಅಜ್ಜ-ಅಜ್ಜಿಯವರೇ ನೋಡಿಕೊಳ್ಳುತ್ತಿದ್ದರು. ಮಾನಸಿಕ ನೆಮ್ಮದಿ ಮಕ್ಕಳಿಗೆ ಸಿಗುತ್ತಿತ್ತು. ಈಗ ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ. ತಂದೆತಾಯಿ ಕಾರು-ಬಂಗಲೆ ಹಿಂದೆ ಬಿದ್ದಿದ್ದಾರೆ. ಮಕ್ಕಳ ಚಿಂತೆ ಅವರಿಗಿಲ್ಲ. ಹೀಗಾಗಿ ಮಕ್ಕಳು ಮಾನಸಿಕವಾಗಿ ಅನಾಥರಾಗಿ ಆತ್ಮಹತ್ಯೆಯ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಇಂಥ ಸಂದರ್ಭ ಬರಬಾರದು ಎಂದು ಸುಪ್ರೀಂ ಕೋರ್ಟ್ ಶಾಲೆಗಳಲ್ಲಿ ಮನೋವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಹೇಳಿದೆ.

ಎರಡನೇ ಮಹಾಯುದ್ಧ ನಡೆದ ಮೇಲೆ ಆಸ್ಟ್ರಿಯ ದೇಶದ ಹರ್ಮನ್ ಗಿಮ್ನರ್ ಎಂಬ ವೈದ್ಯಕೀಯ ವಿದ್ಯಾರ್ಥಿ `ಎಸ್‌ಒಎಸ್’ ವಿಲೇಜ್ ಎಲ್ಲ ಕಡೆ ಆರಂಭಿಸಿದ. ಯಾವುದೇ ಮಗು ಬೆಳೆಯಬೇಕಾದರೆ ತಾಯಿ, ಕುಟುಂಬ, ಸಮುದಾಯ ಬೇಕೆಬೇಕು ಎಂಬುದು ಅವನ ಕಲ್ಪನೆ. ಅದಕ್ಕಾಗಿ ಎಲ್ಲ ದೇಶಗಳಲ್ಲಿ ಇದನ್ನು ಆರಂಭಿಸಿದ. ಇದರಲ್ಲಿ ತಾಯಂದಿರನ್ನು ಸಂಬಳದ ಮೇಲೆ ನೇಮಿಸಲಾಗಿದೆ. ಅವರಿಗೆ ಮನೆಕೊಟ್ಟು 5-6 ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನೀಡಲಾಗುವುದು. ಈ ಮಕ್ಕಳು ಕುಟುಂಬದಲ್ಲಿ ತಾಯಿಯ ಆಸರೆಯಲ್ಲಿ ಬೆಳೆಯುವುದರಿಂದ ಉತ್ತಮ ನಾಗರಿಕರಾಗುತ್ತಾರೆ.

ಈಗ 130 ದೇಶಗಳಲ್ಲಿ ಈ ಸಂಸ್ಥೆ ಇದೆ. ಬೆಂಗಳೂರಿನಲ್ಲೂ ಈ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕುಟುಂಬದ ಕಲ್ಪನೆ ಉಳಿಸಿಕೊಂಡು ಬಂದಿದೆ. ಇದನ್ನು ಪ್ರೋತ್ಸಾಹಿಸಿದರೆ ಮಕ್ಕಳ ಆತ್ಮಹತ್ಯೆ, ದೌರ್ಜನ್ಯ ಸೇರಿದಂತೆ ಎಲ್ಲವನ್ನೂ ತಪ್ಪಿಸಬಹುದು. ವಿವಾಹ ವಿಚ್ಛೇದನ ಕೂಡ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ತುಂಬಿದ ಕುಟುಂಬದಲ್ಲಿ ಆತ್ಮಹತ್ಯೆ ಎಂಬ ಶಬ್ದ ನುಸುಳುವುದಿಲ್ಲ. ಅಕ್ಕ-ಅಣ್ಣನೊಂದಿಗೆ ಬೆಳೆದ ಮಗು ಸಮಾಜದಲ್ಲಿ ಇತರರನ್ನೂ ಅಕ್ಕ-ಅಣ್ಣನ ರೀತಿಯಲ್ಲಿ ಕಾಣುವ ಗುಣ ಬೆಳೆಸಿಕೊಳ್ಳುವುದು ಸಹಜ. ವಸುದೈವ ಕುಟುಂಬಕಂ ಎಂಬುದು ಇದೆ. ಮಕ್ಕಳು ಎಂದರೆ ಹೆಚ್ಚು ಓದಬೇಕು. ಹೆಚ್ಚು ಹಣ ಸಂಪಾದಿಸಿ ಬಿಡಬೇಕು ಎಂಬ ತಂದೆತಾಯಿಗಳ ಆಸೆಯೇ ಮಕ್ಕಳ ಆತ್ಮಹತ್ಯೆ ಹೆಚ್ಚಲು ಕಾರಣವಾಗುತ್ತಿದೆ. ನಮ್ಮ ಕುಟುಂಬದ ಕಲ್ಪನೆ ಹಳೆಯದಾದರೂ ಉತ್ತಮ ಎಂಬುದನ್ನು ಕಾಲವೇ ನಿರ್ಧರಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version