ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಚೀನಾ ಭಾರತದ 2,000 ಚದರ ಕಿಲೋಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಹಾಗೂ 2020 ರ ಗಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಸಾಕಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಚೀನಾ ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನೀವು ನಿಜವಾದ ಭಾರತೀಯರಾಗಿದ್ದರೆ, ಹೀಗೆ ಹೇಳುತ್ತಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೋಮವಾರ ಚಾಟಿ ಬೀಸಿದೆ. ಹಾಗೆಯೇ ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಸಹ ಕೋರ್ಟ್ ತೀವ್ರ ಅಸಮ್ಮತಿ ವ್ಯಕ್ತಪಡಿಸಿದೆ.
ಗಲ್ವಾನ್ ಕಣಿವೆ ಸಂಘರ್ಷ: 2020 ರ ಗಲ್ವಾನ್ ಕಣಿವೆ ಘರ್ಷಣೆ ಇತ್ತೀಚಿನ ಚರಿತ್ರೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಅತ್ಯಂತ ಗಂಭೀರ ಮಿಲಿಟರಿ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದರು. ಆದರೆ ಚೀನಾ ಯಾವುದೇ ಅಧಿಕೃತ ಸಾವು-ನೋವಿನ ಬಗ್ಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿಲ್ಲ ಎನ್ನಲಾಗಿದೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ವಿವಾದಿತ ಪ್ರದೇಶದಲ್ಲಿ ಈ ಘರ್ಷಣೆ ನಡೆದಿತ್ತು.
ಏನಿದು ಪ್ರಕರಣ?: 2022ರ ಡಿಸೆಂಬರ್ 9ರಂದು ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಘರ್ಷಣೆಯ ಬಗ್ಗೆ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆಗಳು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ)ಯ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನ್ಯವು ನಮ್ಮ ಸೈನಿಕರನ್ನು ಥಳಿಸುತ್ತಿದೆ ಎಂದು ಪದೇ ಪದೇ ಹೇಳುವ ಮೂಲಕ ಗಾಂಧಿಯವರು ಭಾರತೀಯ ಸೇನೆಯ ಮಾನಹಾನಿ ಮಾಡಿದ್ದಾರೆ ಎಂದು ಶ್ರೀವಾಸ್ತವ ಹೇಳಿದ್ದರು.
ಕೇಂದ್ರ ಸರ್ಕಾರದ ಪ್ರತ್ಯುತ್ತರ: ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ಭಾರತದ 2,000 ಚದರ ಕಿ.ಮೀ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದಕ್ಕೆ ರಾಹುಲ್ ಗಾಂಧಿಯವರ ಬಳಿ ಪುರಾವೆಗಳಿದ್ದರೆ, ಅದನ್ನು ರಾಷ್ಟ್ರದ ಮುಂದೆ ಪ್ರಸ್ತುತಪಡಿಸಬೇಕು. ಜೊತೆಗೆ ಗಲ್ವಾನ್ ಘರ್ಷಣೆಯ ಕುರಿತು ಸೈನಿಕರ ಬಗ್ಗೆ ಅವರ ಹೇಳಿಕೆಗಳು ತೀವ್ರ ಬೇಜವಾಬ್ದಾರಿಯಿಂದ ಕೂಡಿವೆ. ಸೈನಿಕರು ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಮತ್ತು ಇದು ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಗಂಭೀರ ಹೇಳಿಕೆಗಳನ್ನು ನೀಡುವುದು ಭಾರತದ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸುತ್ತದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?: ರಾಹುಲ್ ಗಾಂಧಿಯವರ ಹೇಳಿಕೆಯು ಭಾರತೀಯ ಸೇನೆ ಮತ್ತು ಅವರ ಕುಟುಂಬ ಸದಸ್ಯರ ನೈತಿಕತೆಯನ್ನು ಕುಗ್ಗಿಸುವಲ್ಲಿ ಕಾರಣವಾಗಿದೆ ಎಂದು ವಿಚಾರಣಾ ನ್ಯಾಯಾಲಯವು ಅವರ ವಿರುದ್ಧ ಈ ಹಿಂದೆ ಸಮನ್ಸ್ ಜಾರಿ ಮಾಡಿತ್ತು. ಸೋಮವಾರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ನೀವು ನಿಜವಾದ ಭಾರತೀಯರಾಗಿದ್ದರೆ,. ಹೀಗೆ ಹೇಳುತ್ತಿರಲಿಲ್ಲ ಎಂದು ನ್ಯಾಯಮೂರ್ತಿ ದತ್ತ ರಾಹುಲ್ ಪರ ವಕೀಲರಿಗೆ ಪ್ರಶ್ನೆ ಕೇಳಿದ್ದಾರೆ.