Home ಸುದ್ದಿ ರಾಜ್ಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ

ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ

0

ಪದವಿ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಅತಿಥಿ ಉಪನ್ಯಾಸಕರ ಕೊರತೆ ನೀಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ರಾಜ್ಯದಲ್ಲಿನ 430 ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆಯ ಸಮಸ್ಯೆ ಎದುರಿಸುತ್ತಿದ್ದು ಕೆಲವೇ ದಿನಗಳಲ್ಲಿ ಪದವಿಯ ಮೊದಲ, ಮೂರನೇ ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು ಬರಲಿರುವ ಹಿನ್ನೆಲೆಯಲ್ಲಿ ತೀವ್ರ ಆತಂಕಕ್ಕೆ ಗುರಿಯಾಗಿದ್ದಾರೆ.

ರಾಜ್ಯದ ಎಷ್ಟೋ ಕಾಲೇಜುಗಳಲ್ಲಿ ಇನ್ನೂ ಪೂರ್ಣಪ್ರಮಾಣದ ತರಗತಿಗಳೇ ನಡೆಯದಂತಹ ಪರಿಸ್ಥಿತಿಯಿರುವುದು ಕಳವಳಕಾರಿಯಾಗಿದೆ. ಈ ಮಧ್ಯೆ ಅತಿಥಿ ಉಪನ್ಯಾಸಕರ ನೇಮಕಾತಿ ಬಿಕ್ಕಟ್ಟು ಪರಿಹರಿಸಲು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಕಾನೂನು ಸಚಿವ ಎಚ್‌. ಕೆ.ಪಾಟೀಲ ಅವರ ನಡುವೆ ನಡೆದ ಮಾತುಕತೆಯು ಅಪೂರ್ಣಗೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

2018ರಲ್ಲಿ ಯುಜಿಸಿಯು ನೆಟ್, ಸೆಟ್, ಸ್ಲೆಟ್ ಮತ್ತು ಪಿಎಚ್‌ಡಿ ಮಾಡಿದವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಕಡ್ಡಾಯ ನಿಯಮ ಜಾರಿಗೊಳಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಅರ್ಹತೆಗಳನ್ನು ಹೊಂದಿರದ ಸುಮಾರು ಐದು ಸಾವಿರ ಉಪನ್ಯಾಸಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದ ಈ ಉಪನ್ಯಾಸಕರು ಸರ್ಕಾರದ ನಡೆಯ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ನ್ಯಾಯಪೀಠ, ಅತಿಥಿ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ನಿಗದಿಪಡಿಸಿರುವ ಕನಿಷ್ಠ ಅರ್ಹತೆಯ ನಿಯಮವನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಯೇ ನೇಮಕಾತಿಗೆ ಮುಂದಾಗಬೇಕೆಂದು ಕಾಲೇಜು ಶಿಕ್ಷಣ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿರುವುದು ಇದೀಗ ಬಿಕ್ಕಟ್ಟಿಗೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸರ್ಕಾರ ಹೊಸ ನೇಮಕಾತಿ ಮಾಡಿಕೊಳ್ಳದ ‘ಇಕ್ಕಟ್ಟಿ’ನಲ್ಲಿದೆ. ಪರಿಣಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರೇ ಇಲ್ಲದೇ ಪಾಠವಿಲ್ಲದಂತಾಗಿದ್ದು ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.

ಕಾನೂನು ತಜ್ಞರ ಜತೆ ಚರ್ಚೆ: ಅತಿಥಿ ಉಪನ್ಯಾಸಕರಿಗೆ ಯುಜಿಸಿ ಅರ್ಹತೆ ಪಡೆಯಲು ಮೂರು ವರ್ಷಗಳ ಕಾಲಮಿತಿ ನಿಗದಿ ಮಾಡಿ, 2025-26ನೇ ಸಾಲಿಗೆ ಮುಂದುವರಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ್ದಾರೆ. ‘ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡಿಮೆ ಗೌರವಧನ ಪಡೆದು ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಯುಜಿಸಿ ಅರ್ಹತೆ ಪಡೆಯದ ಅತಿಥಿ ಉಪನ್ಯಾಸಕರನ್ನು ಮಾನವೀಯ ನೆಲೆಗಟ್ಟಿನಲ್ಲಿ ಮುಂದುವರಿಸುವ ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ಕಾನೂನು ತೊಡಕು ಎದುರಾಗದಂತೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ.

ಈ ಕುರಿತು ದನಿ ಎತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ರಾಜ್ಯದ 15 ಕಾಲೇಜುಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದು ‘ಮೊದಲ ವರ್ಷದ ವಿದ್ಯಾರ್ಥಿಗಳು ಓದುವ ಹಂಬಲದಿಂದ ಕೆಲವೊಮ್ಮೆ 12, 20 ಕಿಲೋಮೀಟರ್ ದೂರದಿಂದ ಕಾಲೇಜಿಗೆ ಬರುತ್ತಾರೆ. ಆದರೆ, ಪಾಠಗಳೇ ನಡೆಯದೇ ನಿರಾಶೆಯಿಂದ ಮನೆಗೆ ತೆರಳುತ್ತಿದ್ದಾರೆ. ಇನ್ನು ಎರಡು ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಈಗಾಗಲೇ ತರಗತಿಗಳಿಗೆ ಹಾಜರಾಗುವುದನ್ನು ಬಿಟ್ಟು ಅರೆಕಾಲಿಕ ಉದ್ಯೋಗಗಳತ್ತ ಚಿತ್ತ ಹರಿಸಿದ್ದಾರೆ. ಇದರಿಂದಾಗಿ ಇಡೀ ಕಲಿಕಾ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಕಾನೂನಾತ್ಮಕ ಬಿಕ್ಕಟ್ಟನ್ನು ಬಗೆಹರಿಸಲು ಉನ್ನತ ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರು ಮಾತುಕತೆ ನಡೆಸಿರುವರಾದರೂ ಫಲಪ್ರದವಾಗಿಲ್ಲ. ಹೀಗಾಗಿ ಪಠ್ಯಕ್ರಮಗಳ ಬೋಧನೆ ಮುಗಿದಿಲ್ಲವಾದ್ದರಿಂದ ಕಲಿಕಾ ಅವಧಿಯನ್ನೇ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಸುಮಾರು 11 ಸಾವಿರ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು 9000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ವರ್ಷ ಪ್ರತಿ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು 75ಕ್ಕೆ ಮಿತಿಗೊಳಿಸಿರುವುದರಿಂದ ಇನ್ನಷ್ಟು ಉಪನ್ಯಾಸಕ ಹುದ್ದೆಗಳು ಸೃಷ್ಟಿಯಾಗಿದ್ದು ಖಾಲಿ ಬಿದ್ದಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version