ಅತಿಥಿ ಉಪನ್ಯಾಸಕರ ನೇಮಕಾತಿ ವಿಚಾರದಲ್ಲಿ ಮಹತ್ವದ ಅಪ್‌ಡೇಟ್ ಇದೆ. ನ್ಯಾಯಾಲಯದಲ್ಲಿದ್ದ ಪದವಿ ಮತ್ತು ತಾಂತ್ರಿಕ ಕಾಲೇಜುಗಳ ಅತಿಥಿ ಶಿಕ್ಷಕರ ನೇಮಕಕ್ಕೆ ಮತ್ತು ನೇಮಕಗೊಂಡಿದ್ದವರ ಮುಂದುವರೆಸಲು ಸರ್ಕಾರ ನ್ಯಾಯಲಯದಿಂದ ಮಧ್ಯಂತರ ಆದೇಶ ಪಡೆದು ಒಪ್ಪಿಗೆ ಸೂಚಿಸಿದೆ.
ಈ ಕುರಿತು ಸಂಜಯ್ ಬಿ.ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಆದೇಶದ ವಿವರ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಏಕ ಕಡತದಲ್ಲಿ ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಮಾನ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ನೀಡಿರುವ ಕಾನೂನು ಅಭಿಪ್ರಾಯದಂತೆ, ರಿಟ್ ಅಪೀಲು ಸಂಖ್ಯೆ:1578/2024 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ 09-09-2025ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನಗಳಿಗೆ ಒಳಪಟ್ಟು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025- 26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಮರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರೆಸಲು ಅನುಮತಿ ನೀಡಿದೆ.
ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ, ಮಾನ್ಯ ನ್ಯಾಯಾಲದ ಮಧ್ಯಂತರ ಆದೇಶದನುಸಾರ, ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯು.ಜಿ.ಸಿ, ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ ಎಂದು ತಿಳಿಸಲು ನಿರ್ದೇಶಿತನಾಗಿದ್ದೇನೆ. ಈ ಆದೇಶ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಅನುಮೋದಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಪದವಿ, ತಾಂತ್ರಿಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಇದೆ. ರಾಜ್ಯದಲ್ಲಿನ 430 ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆಯ ಸಮಸ್ಯೆ ಎದುರಿಸುತ್ತಿದ್ದು ಕೆಲವೇ ದಿನಗಳಲ್ಲಿ ಪದವಿಯ ಪರೀಕ್ಷೆಗಳು ಬರಲಿವೆ. ಆದರೆ ಪಾಠಗಳಿಗೆ ಹಿನ್ನಡೆಯಾಗಿದೆ.
2018ರಲ್ಲಿ ಯುಜಿಸಿಯು ನೆಟ್, ಸೆಟ್, ಸ್ಲೆಟ್ ಮತ್ತು ಪಿಎಚ್‌ಡಿ ಮಾಡಿದವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಕಡ್ಡಾಯ ನಿಯಮ ಜಾರಿಗೊಳಿಸಲಾಯಿತು. ಈ ಆದೇಶದಂತೆ ರಾಜ್ಯ ಸರ್ಕಾರ ಈ ಅರ್ಹತೆಗಳನ್ನು ಹೊಂದಿರದ ಸುಮಾರು 5 ಸಾವಿರ ಉಪನ್ಯಾಸಕರನ್ನು ಕೆಲಸದಿಂದ ತೆಗೆದುಹಾಕಿತು.
ಅತಿಥಿ ಉಪನ್ಯಾಸಕರ ನೇಮಕ ಮಾಡಲು, ಮುಂದುವರೆಸಲು ಕಾನೂನಾತ್ಮಕ ಬಿಕ್ಕಟ್ಟು ಎದುರಾಗಿತ್ತು. ಇದನ್ನು ಬಗೆಹರಿಸಲು ಉನ್ನತ ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರು ಮಾತುಕತೆ ನಡೆಸಿದ್ದರು. ಆದರೆ ವಿಚಾರ ಕೋರ್ಟನಲ್ಲಿ ಇರುವುದರಿಂದ ಈಗ ಕೋರ್ಟ್ ಒಪ್ಪಿಗೆ ಪಡೆದು ನೇಮಕಾತಿಗೆ ಹಸಿರು ನಿಶಾನೆ ತೋರಿಸಲಾಗಿದೆ.
ಕರ್ನಾಟಕದಲ್ಲಿ ಸುಮಾರು 11,000 ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು 9000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.