Home ಸುದ್ದಿ ರಾಜ್ಯ ಸೂಕ್ಷ್ಮ ವಿಚಾರಗಳಲ್ಲಿ ಬೇಡದ ಮಾತಾಡ್ಬೇಡಿ: ಮಂತ್ರಿಗಳಿಗೆ ಸಿದ್ದು ವಾರ್ನಿಂಗ್

ಸೂಕ್ಷ್ಮ ವಿಚಾರಗಳಲ್ಲಿ ಬೇಡದ ಮಾತಾಡ್ಬೇಡಿ: ಮಂತ್ರಿಗಳಿಗೆ ಸಿದ್ದು ವಾರ್ನಿಂಗ್

0

ಬೆಂಗಳೂರು: ಪ್ರತಿಪಕ್ಷಗಳ ನಾಯಕರನ್ನು ಟೀಕಿಸುವ ಭರದಲ್ಲಿ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸ್ವಲ್ಪ ಎಚ್ಚರವಹಿಸುವಂತೆ ಸಚಿವರುಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಕ್ಯಾಬಿನೆಟ್ ಸಭೆ ಆರಂಭಕ್ಕೂ ಮುನ್ನ ಔಪಚಾರಿಕವಾಗಿ ಕೆಲವು ವಿಚಾರಗಳು ಪ್ರಸ್ತಾಪವಾದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತಾಡಿದ ಸಿಎಂ, ಇತ್ತೀಚೆಗೆ ಧರ್ಮಸ್ಥಳ ವಿಚಾರ ಮಾತ್ರವಲ್ಲದೆ ಹಲವು ವಿಷಯದಲ್ಲಿ ಪ್ರತಿಪಕ್ಷಗಳ ಮುಖಂಡರು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ.

ನಮ್ಮಿಂದಲೂ ಸಾಕಷ್ಟು ಸಮರ್ಥವಾಗಿಯೇ ಪ್ರತ್ಯುತ್ತರ ಕೊಟ್ಟಿದ್ದೇವೆ. ಆದರೆ ಕೆಲವೊಮ್ಮೆ ಸಚಿವರು, ಶಾಸಕರು ಟೀಕಿಸುವ ಭರದಲ್ಲಿ ಆಡುವ ಮಾತುಗಳು ವಿವಾದಕ್ಕೆ ತಿರುಗುತ್ತಿದ್ದು, ವಿಪಕ್ಷಗಳು ಇದನ್ನೇ ರಾಜಕೀಯ ಅಸ್ತ್ರವಾಗಿಸಿಕೊಳ್ಳುವ ಹುನ್ನಾರ ನಡೆಸಿವೆ. ಹಾಗಾಗಿ ಇನ್ನು ಮುಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ ಸ್ವಲ್ಪ ಹುಷಾರಾಗಿರಿ ಎಂದು ಮಂತ್ರಿಗಳಿಗೆ ತಿಳಿಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಮದ್ದೂರು ಬಗ್ಗೆಯೇ ಹೆಚ್ಚು ಮಾತು: ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲುತೂರಾಟ ಆಗಿದ್ದು, ನಂತರ ಬಿಜೆಪಿ ನಾಯಕರ ಪ್ರತಿಭಟನೆ, ಲಾಠಿಪ್ರಹಾರ ಇತ್ಯಾದಿ ವಿಷಯಗಳು ಸಂಪುಟಸಭೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದ್ದಾಗಿ ಹೇಳಲಾಗಿದೆ. ಒಟ್ಟಾರೆ ಗಲಾಟೆ ಬಗ್ಗೆ ಏನೇನಾಗಿದೆ ಹೇಳ್ರಿ ಎಂದು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರತಿಪಕ್ಷಗಳು ಇಂತಹ ವಿಚಾರವನ್ನೇ ಕಾದು ಕುಳಿತು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗುತ್ತಾರೆ. ಇದೇನು ಹೊಸತಲ್ಲ. ಹಾಗಾಗಿ ಗಣೇಶೋತ್ಸವ ಮಾತ್ರವಲ್ಲ ಯಾವುದೇ ಹಬ್ಬಹರಿದಿನಗಳಲ್ಲಿ ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶವಾಗದಂತೆ ಎಚ್ಚರವಹಿಸಬೇಕಿದೆ. ಈ ಬಗ್ಗೆ ಜಿಲ್ಲಾಡಳಿತಗಳಿಗೆ ಸಚಿವರು ಸೂಕ್ಷ್ಮವಾಗಿರಲು ಸೂಚಿಸಿ ಎಂದು ತಿಳಿಸಿರುವ ಸಿದ್ದರಾಮಯ್ಯ. ಕಾನೂನು ಕ್ರಮ ಎಲ್ಲರಿಗೂ ಒಂದೇ ದುಷ್ಕರ್ಮಿಗಳು ಯಾರೇ ಇರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ ಎಂದೂ ತಾಕೀತು ಮಾಡಿದ್ದಾಗಿ ತಿಳಿದುಬಂದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version