ಮೈಸೂರು: “ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷಗಿರಿಯನ್ನು ಎಸ್‌ಸಿ ವರ್ಗದವರಿಗೆ ಬಿಟ್ಟುಕೊಡಲಿ ಮತ್ತು ದೇಶದ ಪ್ರಧಾನಿ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದವರಿಗೆ ಬಿಟ್ಟುಕೊಡಲಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಹೆಸರಿಗೆ ಕಾಂಗ್ರೆಸ್ ಸೂಚಿಸಲಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಅಧ್ಯಕ್ಷಗಿರಿಯನ್ನು ಎಸ್‌ಸಿ ವರ್ಗದವರಿಗೆ ಬಿಟ್ಟುಕೊಡಲಿ ಮತ್ತು ದೇಶದ ಪ್ರಧಾನಿ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದವರಿಗೆ ಬಿಟ್ಟುಕೊಡಲಿ. ಸಂವಿಧಾನ ಬದ್ಧವಾಗಿ ಸಾಮಾಜಿಕ ನ್ಯಾಯದ ಪರವಾಗಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ” ಎಂದರು.
“ಬಿಜೆಪಿಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಸಮಾವೇಶ, ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಕೆಲಸವನ್ನು ಜನರ ಮುಂದಿಡುವ ಕಾರ್ಯಕ್ರಮವಾಗಿದೆ. ಮೈಸೂರಿನಲ್ಲಿ ಭಾನುವಾರ ಸುಮಾರು 2,600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ. ಬಿಜೆಪಿಯವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“ಮೈಸೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಶನಿವಾರ ನಡೆಯುವ ಕಾರ್ಯಕ್ರಮ ಯಾರದೇ ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ. ಅದು ಅಭಿವೃದ್ಧಿಯ ಕಾರ್ಯಕ್ರಮ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಎರಡು ವರ್ಷದ ಸಾಧನಾ ಸಮಾವೇಶವನ್ನು ಜುಲೈ 19ರಂದು ಆಯೋಜಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರವೇ ಮೈಸೂರಿಗೆ ತೆರಳಿದ್ದಾರೆ. ಇದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಸಮಾವೇಶವೇ? ಎಂಬ ಚರ್ಚೆಗಳು ಸಹ ನಡೆದಿವೆ.
ಅಧಿಸೂಚನೆ ಹೊರಡಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೃಷ್ಣಾ ಜಲವಿವಾದ ನ್ಯಾಯಾಧೀಕರಣದ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ನೀರು ಹಂಚಿಕೆಯ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ” ಎಂದರು.
“ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ನಡುವೆ ಅಂತರರಾಜ್ಯ ಜಲವಿವಾದವಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆಯ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಮತ್ತು ತೀರ್ಪಿನನ್ವಯ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವುದೇ ನಷ್ಟವೂ ಆಗುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524.26 ಮೀ ಗಳಿಗೆ ಹೆಚ್ಚಿಸಲು ಅನುಮತಿ ನೀಡಿದ್ದಾರೆ.” ಎಂದು ಹೇಳಿದರು.