ನವದೆಹಲಿ: ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನ್‌ಖರ್ ಸೋಮವಾರ ಆರೋಗ್ಯದ ಕಾರಣವನ್ನು ನೀಡಿ ರಾಜೀನಾಮೆ ನೀಡಿದ್ದರು. ಇಂದು ರಾಜೀನಾಮೆ ಅಂಗೀಕಾರವಾಗಿದೆ. ಈಗ ಮುಂದಿನ ಉಪ ರಾಷ್ಟ್ರಪತಿ ಯಾರು? ಎಂಬ ಚರ್ಚೆ ನಡೆದಿದೆ.
ಸದ್ಯಕ್ಕೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಎನ್‌ಡಿಎ ಅಥವ ಇಂಡಿಯಾ ಮೈತ್ರಿಕೂಟ ಘೋಷಣೆ ಮಾಡಿಲ್ಲ. ನಿಯಮದ ಪ್ರಕಾರ ಉಪ ರಾಷ್ಟ್ರಪತಿ ಸ್ಥಾನ ತೆರವುಗೊಂಡ 60 ದಿನಗಳೊಳಗೆ ಚುನಾವಣೆ ನಡೆಯಬೇಕಾಗುತ್ತದೆ. ಅಂದರೆ ಅಂದಾಜು ಸೆಪ್ಟೆಂಬರ್ 19 ರೊಳಗೆ ಹೊಸ ಉಪ ರಾಷ್ಟ್ರಪತಿ ಆಯ್ಕೆಯಾಗಬೇಕಿದೆ.
ಎಷ್ಟು ಮತಗಳು ಬೇಕು?; ಉಪ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಮತದಾನ ಮಾಡಲಿದ್ದಾರೆ. 788 ಸದಸ್ಯರು (543+245) ಗೌಪ್ಯ ಮತದಾನದ ಮೂಲಕ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಗೆ 395 ಸಂಸದರ ಮತಗಳು ಬೇಕಾಗುತ್ತವೆ. ಆದರೆ ಅದು ಕೇವಲ 341 ಸಂಸದರನ್ನು ಹೊಂದಿದೆ. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ನೆರವಿನಿಂದ ಬಿಜೆಪಿಯ ಬಲ 426. ಆದ್ದರಿಂದ ಯಾರೇ ಎನ್‌ಡಿಎ ಮೈತ್ರಿಕೂಟದಿಂದ ಅಭ್ಯರ್ಥಿಯಾದರೂ ಗೆಲುವು ನಿಶ್ಚಿತ.
ಉಪ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಎನ್‌ಡಿಎ ಇನ್ನು ಯಾವುದೇ ನಿರ್ಧಾರ ತಿಳಿಸಿಲ್ಲ. ಆದರೆ ಪಕ್ಷದ ವಲಯದೊಳಗೆ ಚರ್ಚೆಗಳು ಮತ್ತು ರಣನೀತಿಗಳು ನಡೆಯುತ್ತಿವೆ. ಕಾಂಗ್ರೆಸ್, ಜೆಡಿಯು, ಬಿಜೆಪಿ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿದ್ದು, ಮುಂದಿನ ವಾರ ಅಭ್ಯರ್ಥಿ ಘೋಷಣೆ ನಿರೀಕ್ಷಿಸಲಾಗುತ್ತಿದೆ.
ಈಗಾಗಲೇ ಕೆಲವು ಹೆಸರುಗಳು ತೆರೆಮರೆಯಲ್ಲಿ ಒಡಾಡುತ್ತಿವೆ. ಇದಕ್ಕೆ ಪುಷ್ಠಿ ಎನ್ನುವಂತೆ ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್, ಎಲ್ಲರೂ ನಿತೀಶ್ ಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ನೋಡಲು ಬಯಸುತ್ತಾರೆ ಎಂದು ಹೇಳಿದ್ದಾರೆ ಎಂಬ ವರದಿಗಳಿವೆ. ಬಿಹಾರದಲ್ಲಿ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿರುವ ನಿತೀಶ್ ಕುಮಾರ್ ಇದಕ್ಕೆ ಒಪ್ಪಲಿದ್ದಾರೆಯೇ?
ಬಿಹಾರ ಚುನಾವಣೆ ಎದುರಾಗಿರುವಾಗ ಬಿಜೆಪಿ, ಜೆಡಿಯು ಈ ಕಾರ್ಯತಂತ್ರಕ್ಕೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕಿದೆ. ಉಳಿದಂತೆ ಈ ಹುದ್ದೆಗೆ ಚರ್ಚೆಯಾಗುತ್ತಿರುವ ಪ್ರಮುಖ ಹೆಸರಿನಲ್ಲಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸಿಂಗ್ ಸಹ ಒಬ್ಬರು.
ರಾಜ್ಯಸಭೆಯ ಅಧ್ಯಕ್ಷರ ಪಾತ್ರವನ್ನು ಹೊರತುಪಡಿಸಿ, ಮಧ್ಯಂತರದಲ್ಲಿ ಉಪಾಧ್ಯಕ್ಷರ ಕಾರ್ಯಗಳನ್ನು ಯಾರು ನಿರ್ವಹಿಸುತ್ತಾರೆ? ಎಂಬುದನ್ನು ಸಂವಿಧಾನವು ನಿರ್ದಿಷ್ಟಪಡಿಸಿಲ್ಲ. ಉಪಸಭಾಪತಿ ಅಥವಾ ರಾಷ್ಟ್ರಪತಿಗಳಿಂದ ಅಧಿಕಾರ ಪಡೆದ ಇನ್ನೊಬ್ಬರು ರಾಜ್ಯಸಭಾ ಸದಸ್ಯರು ಈ ಕಾರ್ಯವನ್ನು ನಿರ್ವಹಿಸಬಹುದು.
2019ರಲ್ಲಿ ಕೇಂದ್ರ ಸರ್ಕಾರ ಖ್ಯಾತ ವಕೀಲರಾಗಿದ್ದ ಜಗದೀಪ್ ಧನ್‌ಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕ ಮಾಡಿತು. 2022ರಲ್ಲಿ ಅವರು ಭಾರತದ ಉಪ ರಾಷ್ಟ್ರಪತಿಯಾಗಿ ನೇಮಕಗೊಂಡರು ಅವರ ಅವಧಿ 2027ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಆರೋಗ್ಯದ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.