ಇಸ್ಲಾಮಾಬಾದ್: ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ಖೈಬರ್ ಫಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 30 ಮಂದಿ ಹತ್ಯೆಗೀಡಾಗಿದ್ದಾರೆ. ತ್ರೆಹೀಕ್ ಎ ತಾಲಿಬಾನ್(ಟಿಟಿಪಿ)ನ ಸ್ಥಳೀಯ ಕಮಾಂಡರುಗಳಾದ ಅಮಾನ್ ಗುಲ್ ಹಾಗೂ ಮಸೂದ್ ಖಾನ್ ಅವರನ್ನು ಗುರಿಯಾಗಿರಿಸಿ ಈ ದಾಳಿ ನಡೆದಿದ್ದರೂ ಸಾವಿಗೀಡಾದವರೆಲ್ಲರೂ ನಾಗರಿಕರೆಂದು ಹೇಳಲಾಗುತ್ತಿದೆ.
ಪಾಕಿಸ್ತಾನ ವಾಯುಪಡೆಯು ಚೀನಾ ನಿರ್ಮಿತ ಜೆಎಫ್-17 ಥಂಡರ್ ಜೆಟ್‌ಗಳನ್ನು ಬಳಸಿ ಭಾನುವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ತಿರಾಹ್ ಕಣಿವೆ ಪ್ರದೇಶದಲ್ಲಿ ಎಂಟು ಎಲ್‌ಎಸ್-6 ಬಾಂಬ್‌ಗಳನ್ನು ಬೀಳಿಸಿರುವುದರಿಂದ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಹಲವಾರು ಕುಟುಂಬಗಳು ಗಾಢ ನಿದ್ರೆಯಲ್ಲಿದ್ದಾಗ ಬಾಂಬ್‌ಗಳನ್ನು ಬೀಳಿಸಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಟಿಟಿಪಿ ನಿರ್ವಹಿಸುವ ಬಾಂಬ್ ಘಟಕದ ಮೇಲೆ ದಾಳಿ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಈ ಉಗ್ರರ ಗುಂಪಿಗೆ ಆ ದೇಶದ ಸರ್ಕಾರ ಬೆಂಬಲ ವನ್ನೂ ನೀಡುತ್ತಿದೆ. ಆದರೆ ಅಫ್ಘಾನಿಸ್ತಾನ ಸರ್ಕಾರ ಪಾಕಿಸ್ತಾನ ಆರೋಪವನ್ನು ತಳ್ಳಿಹಾಕಿದೆ.
ಟಿಟಿಪಿಯ ಕಮಾಂಡರ್‌ಗಳಾದ ಅಮನ್ ಗುಲ್ ಹಾಗೂ ಮಸೂದ್ ಖಾನ್ ಈ ಗ್ರಾಮದಲ್ಲಿ ಬಾಂಬ್ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಅದರಲ್ಲಿ ಕಾರ್ಯನಿರ್ವಹಿಸಲು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದಾರೆ ಎಂದು ಖೈಬರ್ ಪೊಲೀಸರು ತಿಳಿಸಿದ್ದಾರೆ.
ದಾಳಿ ನಿರಾಕರಿಸಿದ ಪಾಕ್ ಸೇನೆ: ಅದೇನಿದ್ದರೂ ಈ ವೈಮಾನಿಕ ದಾಳಿಯಲ್ಲಿ ತನ್ನದೇನೂ ಪಾತ್ರ ಇಲ್ಲ ಎಂದು ಪಾಕಿಸ್ತಾನ ವಾಯುಪಡೆ ಸಮರ್ಥಿಸಿಕೊಂಡಿದೆ. ಮೆತ್ರಾ ದಾರದ ಮನೆ ಯೊಳಗೆ ಖಾವರಿಜ್ ಉಗ್ರಗಾಮಿಗಳು ಅವಿತಿರಿಸಿದ್ದ ಸ್ಫೋಟಕ ಸಾಮಗ್ರಿಗಳು ಸ್ಫೋಟಿಸಿರುವುದರಿಂದ ಈ ದುರಂತ ಸಂಭವಿಸಿದೆ ಎಂದೂ ಹೇಳಿಕೊಂಡಿದೆ.
ಏಕೆ ನಡೆಯಿತು ದಾಳಿ?
ಖೈಬರ್ ಫಖ್ತುಂಖ್ವಾ ತೆಹ್ರೀಕ್ ಎ ತಾಲೀಬಾನ್ ಭಯೋದ್ಪಾದಕರ ಬಲವಾದ ನೆಲೆಯಾಗಿದೆ
ಟಿಟಿಪಿ ಉಗ್ರರ ನೆಲೆಗಳನ್ನು ಗುರಿಯನ್ನಾಗಿಸಿ ಪಾಕಿಸ್ತಾನ ಕೆಲವು ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದೆ.
ಟಿಟಿಪಿಯ ಕಮಾಂಡರ್‌ಗಳು ಈಗ ದಾಳಿ ನಡೆಸಿದ ಪ್ರದೇಶದಲ್ಲಿ ಬಾಂಬ್ ತಯಾರಿಕಾ ಘಟಕ ಸ್ಥಾಪಿಸಿದ್ದಾರೆನ್ನುವ ಆರೋಪ ಇತ್ತು.