Home ಸುದ್ದಿ ವಿದೇಶ ಟ್ರಂಪ್ ಮಣಿಸಲು ಭಾರತ-ಚೀನಾ ಒಗ್ಗಟ್ಟು

ಟ್ರಂಪ್ ಮಣಿಸಲು ಭಾರತ-ಚೀನಾ ಒಗ್ಗಟ್ಟು

0

ಟಿಯಾನ್‌ಜಿನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದವನ್ನು ಶಾಂತಿ, ನೆಮ್ಮದಿ ಮತ್ತು ನ್ಯಾಯಯುತವಾಗಿ ಬಗೆಹರಿಸಿಕೊಳ್ಳುವ ಒಮ್ಮತ ನಿರ್ಧಾರ ಮಾಡಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧವನ್ನು ಮೂರನೇ ರಾಷ್ಟ್ರಗಳ ದೃಷ್ಟಿಕೋನದಿಂದ ನೋಡಬಾರದು ಎಂದೂ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.

ಜತೆಗೆ ಜಾಗತಿಕ ವ್ಯಾಪಾರ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಉಭಯ ನಾಯಕರು ಸಮ್ಮತಿಸಿದ್ದಾರೆ. ಭಾರತದ ಮೇಲೆ ಅಮೆರಿಕದ ಶೇ. 50ರಷ್ಟು ಸುಂಕ ಜಾರಿಯಾದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗ ಶಾಂಘೈ ಸಹಕಾರ ಸಂಘ(ಎಸ್‌ಸಿಒ)ದ ವಾರ್ಷಿಕ ಶೃಂಗಸಭೆಗಾಗಿ ಚೀನಾಕ್ಕೆ ಭಾನುವಾರ ಭೇಟಿ ನೀಡಿದ್ದು, ಇದೇ ವೇಳೆ ಟಿಯಾನ್‌ಜಿನ್‌ಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪರಸ್ಪರರ ಯಶಸ್ಸಿಗೆ ಉಭಯ ದೇಶಗಳು ಸ್ನೇಹಿತರಾಗಿರುವುದೇ ಸರಿಯಾದ ಆಯ್ಕೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.

ಇದೇ ವೇಳೆ 2024ರ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್‌ನ ಶೃಂಗಸಭೆಯ ಭೇಟಿ ನಂತರ ಪೂರ್ವ ಲಡಾಕ್‌ನ ಎರಡು ಪ್ರಮುಖ ಘರ್ಷಣೆ ಸ್ಥಳಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ, ಚೀನೀ ಪ್ರವಾಸಿಗರಿಗೆ ಭಾರತೀಯ ವೀಸಾಗಳು ಮತ್ತು ಎರಡೂ ದೇಶಗಳ ನಡುವೆ ನೇರ ವಿಮಾನಗಳ ಪುನರಾರಂಭದ ಬಗ್ಗೆ ಮಾತುಕತೆ ನಡೆದವು.

ಸುಂಕ ನೀತಿಗಳಿಂದಾಗಿ ಭಾರತ-ಅಮೆರಿಕ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಮೋದಿ ಮತ್ತು ಷಿ ಜಿನ್‌ಪಿಂಗ್ ಭೇಟಿ ಬಹಳ ಮಹತ್ವ ಪಡೆದಿದೆ.

ಎಸ್‌ಸಿಒ ಶೃಂಗಸಭೆ: ಪ್ರಸ್ತುತ 10 ಪೂರ್ಣ ಸದಸ್ಯರನ್ನು ಹೊಂದಿದೆ. ಭಾರತ, ಬೆಲರೂಸ್, ಚೀನಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್, ಜೊತೆಗೆ ಹಲವಾರು ಸಂವಾದ ಪಾಲುದಾರರು ಮತ್ತು ವೀಕ್ಷಕ ರಾಷ್ಟ್ರಗಳಿವೆ.

ಬ್ರಿಕ್ಸ್ 26ಗೆ ಚೀನಾಗೆ ಆಹ್ವಾನ: 226ರಲ್ಲಿ ಬ್ರಿಕ್ಸ್ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಖುದ್ದು ಮುಖತಃ ಆಹ್ವಾನಿಸಿದ್ದಾರೆ. ಈ ಆಹ್ವಾನಕ್ಕಾಗಿ ಅಧ್ಯಕ್ಷ ಷಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

ಗಡಿ ಶಾಂತಿ ವಿಮೆ ರೀತಿ: ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಶಾಂತಿಯುತ ವಾತಾವರಣ ದ್ವಿಪಕ್ಷೀಯ ಸಂಬಂಧಗಳಿಗೆ ವಿಮೆ ಇದ್ದ ಹಾಗೆ ಎನ್ನುವ ಸಂದೇಶವನ್ನು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮುಟ್ಟಿಸಿದ್ದಾರೆ. ಎರಡೂ ಕಡೆ ಇದಕ್ಕೆ ಸಮ್ಮತ ಇರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರೀ ಹೇಳಿದ್ದಾರೆ.

ಮೋದಿ ಮತ್ತು ಷಿ ಜಿನ್‌ಪಿಂಗ್ ಚರ್ಚೆ ಮುಖ್ಯಾಂಶ
ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಪುನರಸ್ಥಾಪಿಸಲು ಒಪ್ಪಿಗೆ.
ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ.
ಭಾರತ ಮತ್ತು ಚೀನಾ ನಡುವೆ ನೇರ ವಿಮಾನಗಳ ಪುನರಾರಂಭ.
ಎರಡು ದೇಶಗಳು ಪ್ರತಿಸ್ಪರ್ಧಿಗಳಲ್ಲ.. ಅಭಿವೃದ್ಧಿ ಪಾಲುದಾರರು ಎಂಬುದಕ್ಕೆ ಸಹಮತ.

NO COMMENTS

LEAVE A REPLY

Please enter your comment!
Please enter your name here

Exit mobile version