ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಶುಲ್ಕವನ್ನು ದಿಢೀರಾಗಿ ಅಪಾರ ಪ್ರಮಾಣದಲ್ಲಿ ಹೆಚ್ಚಿಸಿರುವುದು-ಬೆಂಗಳೂರಿನ ಟೆಕ್ಕಿ ದಂಪತಿ ಪಾಲಿಗೆ ದೊಡ್ಡ ಆಘಾತ ನೀಡಿದೆ.
ಬೆಂಗಳೂರು ಮೂಲದ ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಈ ದಂಪತಿ ಪೈಕಿ ಒಬ್ಬರು ಅಮೆರಿಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬರು ಭಾರತೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇದೀಗ ಈ ದಂಪತಿಗೆ ಎಚ್-1 ಬಿ ವೀಸಾ ಶುಲ್ಕ ಏರಿಕೆ ಭಾರೀ ಸಮಸ್ಯೆಯನ್ನು ತಂದೊಡ್ಡಿದೆ.
ನಮ್ಮ ಕಂಪನಿಯು ವರ್ಷದಿಂದ ವರ್ಷಕ್ಕೆ ಇಷ್ಟೊಂದು ದೊಡ್ಡ ಮೊತ್ತ ನೀಡಿ ನಮ್ಮನ್ನು ಕೆಲಸದಲ್ಲಿ ಉಳಿಸಿಕೊಳ್ಳುವುದೇ? ಅಥವಾ ನಮಗೆ ಈ ಮೊತ್ತ ಭರಿಸಲು ಸಾಧ್ಯವೇ? ಎಂದು ಪ್ರಶ್ನಿಸುವ ಹೆಸರು ಬಹಿರಂಗಪಡಿಸಲಿಚ್ಚಿಸದ ಪತ್ನಿ, ಕಳೆದ ಜನವರಿಯಿಂದಲೂ ಬದುಕು ದುಸ್ತರವಾಗಿದೆ. ನಿತ್ಯ ಅಸುರಕ್ಷತೆ ಮತ್ತು ಆತಂಕ ಕಾಡುತ್ತಿದೆ ಎನ್ನುತ್ತಾರೆ.
ಇದು ಈ ದಂಪತಿಯೊಬ್ಬರ ವ್ಯಥೆಯಲ್ಲ. ಅಮೆರಿಕದ ವಿವಿಧೆಡೆ ವಿವಿಧ ಕಂಪನಿಗಳಲ್ಲಿ ಎಚ್-1ಬಿ ವೀಸಾದ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ಅಂದಾಜು ಮೂರು ಲಕ್ಷ ಭಾರತೀಯರನ್ನು ಕಾಡುತ್ತಿರುವ ಸಮಸ್ಯೆಯಿದಾಗಿದೆ. ಮೂಲಗಳಪ್ರಕಾರ ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳಲ್ಲಿ ಕರ್ನಾಟಕದವರೇ ಹೆಚ್ಚಿದ್ದು ಸುಮಾರು 1.25 ಲಕ್ಷ ಕನ್ನಡಿಗರು ಎಚ್-1 ಬಿ ವೀಸಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಈಗ ಕೆಲಸ ಕಳೆದುಕೊಳ್ಳುವ ಭೀತಿ ಕಾಡಲಾರಂಭಿಸಿದೆ.
ಎಚ್-1ಬಿ ವೀಸಾ ಶುಲ್ಕ ಏರಿಕೆಯು ಪ್ರಮುಖ ಬದಲಾವಣೆಯ ನೀತಿಯಾಗಿದ್ದು ಜಾಗತಿಕ ಮಾಹಿತಿ ತಂತ್ರಜ್ಞಾನ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಅಮೆರಿಕ ಮತ್ತು ಭಾರತದಲ್ಲಿರುವ ಕಂಪನಿಗಳು ಪ್ರತಿಭಾವಂತರನ್ನು ಹೇಗೆ ನಿಭಾಯಿಸುವುದೆಂಬ ಸವಾಲನ್ನು ತಂದೊಡ್ಡಿದೆ. ಈ ಶುಲ್ಕ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಭಾರತೀಯ ಪ್ರತಿಭೆಗಳನ್ನು ಇಷ್ಟೊಂದು ದೊಡ್ಡ ಮೊತ್ತದ ಶುಲ್ಕ ಪಾವತಿಸಿ ನಿಯೋಜಿಸುವುದು ಆರ್ಥಿಕವಾಗಿ ಬಹಳ ಹೊರೆಯೆನಿಸಲಿದೆ ಎನ್ನುತ್ತಾರೆ ತೋಲಾನ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಅವಿನಾಶ್ ವಶಿಷ್ಯ.
ಎಚ್-1ಬಿ ವೀಸಾ ಹೊಂದಿರುವವರಲ್ಲಿ ಶೇ.78ರಷ್ಟು ಮಂದಿ ವಾರ್ಷಿಕ ಒಂದು ಲಕ್ಷ ಡಾಲರ್‌ನಷ್ಟು ಸಂಪಾದನೆ ಮಾಡುತ್ತಿದ್ದಾರೆ. ಇನ್ನು ಶೇ. 60ರಷ್ಟು ಮಂದಿ ಒಂದು ಲಕ್ಷ ಡಾಲರ್‌ಗಿಂತಲೂ ಕಡಿಮೆ ಆದಾಯ ಗಳಿಸುತ್ತಿದ್ದು ಈ ಮೊತ್ತ ವೀಸಾ ಶುಲ್ಕಕ್ಕೆ ಸಮ ಅಥವಾ ಕೊಂಚ ಹೆಚ್ಚಾಗಿದೆಯಷ್ಟೆ. ಈ ಸಂಬಳದಾರರು ಜೀವನ ನಿರ್ವಹಣೆಯ ಖರ್ಚಿಗೆ ಪರದಾಡುವಂತಹ ಪರಿಸ್ಥಿತಿಯಿದ್ದಯ ಅಮೆರಿಕದಲ್ಲಿ ಮುಂದುವರಿಯುವುದು ಕಷ್ಟವಾಗಲಿದೆ ಎನ್ನಲಾಗಿದೆ.
ಕೆಲ ಕಂಪನಿಗಳು ಈಗಾಗಲೇ ವೀಸಾ ಶುಲ್ಕ ಏರಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವವರೆಗೂ ಕೆಲಸವನ್ನು ಸ್ಥಗಿತಗೊಳಿಸುವಂತೆ ಸೂಚಿಸಿರುವುದು ಅದಾಗಲೇಕೆಲಸ ಕಳೆದುಕೊಳ್ಳುವ ಆತಂಕದಲ್ಲಿರುವ ಐಟಿ ಉದ್ಯೋಗಿಗಳ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೊಂದು ಜಾಗತಿಕ ಪರಿವರ್ತನೆಯ ಕಾಲ ಎನ್ನಲಾಗುತ್ತಿದ್ದು ಟ್ರಂಪ್ ಅವರ ಈ ನಡೆಯಿಂದ ಅಮೆರಿಕಕ್ಕೆ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಲಿದೆ ಜತೆಗೆ ಪ್ರತಿಭಾ ಪಲಾಯನ ಭಾರತದಿಂದ ಅಮೆರಿಕಕ್ಕೆ ಬದಲಾಗಿ ಅಮೆರಿಕದಿಂದ ಭಾರತಕ್ಕೆ ಆಗಲಿದೆ ಎನ್ನುತತಾರೆ ಲೀಡರ್‌ಶಿಪ್ ಕ್ಯಾಪಿಟಲ್‌ನ ಸಿಇಓ ಬಿ.ಎಸ್.ಮೂರ್ತಿ.
ಈ ಮಧ್ಯೆ ಅಮೆರಿಕದ ಶ್ವೇತಭವನದ ಕೈಗಾರಿಕಾ ಘಟಕವೆನ್ನಲಾದ ನಾಸ್ಕಾಂ, ಟ್ರಂಪ್ ಅವರ ಆದೇಶದ ವಿವರಗಳ ಅಧ್ಯಯನ ಮಾಡುತ್ತಿದ್ದು ಈ ಆದೇಶ ಸಹಜವಾಗಿಯೇ ಅಮೆರಿಕದ ಆವಿಷ್ಕಾರದ ಪರಿಸರ ಮತ್ತು ವಿಸ್ತ್ರತ ಉದ್ಯೋಗದ ಆರ್ಥಿಕತೆ ಮೇಲೆ ಪರಿಣಾಮ ಬೀರುವುದು ಖಚಿತ. ಭಾರತೀಯ ಕಂಪನಿಗಳಿಗೂ ಈ ಬಿಸಿ ತಟ್ಟಲಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕಂಪನಿಗಳು ಮತ್ತು ಭಾರತೀಯ ಕೇಂದ್ರದ ಕಂಪನಿಗಳು ಎಚ್-1ಬಿ ವೀಸಾವುಳ್ಳವರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿದ್ದು ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶವನ್ನು ನೀಡುವ ಪರಿಪಾಠ ಆರಂಭಿಸಿರುವುದರಿಂದ ಈ ಹೊಸ ಆದೇಶ ಅಂತಹ ವ್ಯತಿರಿಕ್ತ ಪರಿಣಾಮವನ್ನು ಬೀರದು ಎಂದು ಹೇಳಿದೆ.