Home ಸುದ್ದಿ ವಿದೇಶ ಅಫ್ಘಾನಿಸ್ತಾನ ಪ್ರಬಲ ಭೂಕಂಪ, ನೂರಾರು ಜನರ ಸಾವು

ಅಫ್ಘಾನಿಸ್ತಾನ ಪ್ರಬಲ ಭೂಕಂಪ, ನೂರಾರು ಜನರ ಸಾವು

0

ಪೂರ್ವ ಅಫ್ಘಾನಿಸ್ತಾನದಲ್ಲಿ ಸೋಮವಾರ ಮುಂಜಾನೆ ಪಾಕಿಸ್ತಾನ ಗಡಿಯ ಸಮೀಪದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ.

ಪೂರ್ವ ಅಫ್ಘಾನಿಸ್ತಾನದಲ್ಲಿ ಈ ಭೂಕಂಪ ಸಂಭವಿಸಿದೆ. ಸದ್ಯದ ಮಾಹಿತಿ ಪ್ರಕಾರ 115 ಜನರು ಗಾಯಗೊಂಡಿದ್ದು, ನಂಗ್ರಾರ್ ಮತ್ತು ಕುನಾರ್‌ನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಭಾನುವಾರ ತಡರಾತ್ರಿ ಬಳಿಕ ಭೂಕಂಪನದ ಅನುಭವ ಪ್ರಾರಂಭವಾಯಿತು. 11.47ರ ಸುಮಾರಿಗೆ ಮೊದಲ ಕಂಪನದ ಅನುಭವವಾಗಿದೆ ಎಂದು ಅಮೆರಿಕ ಜಿಯಾಲಾಜಿಕಲ್ ಸರ್ವೆ ಹೇಳಿದೆ.

ಈ ಭೂಕಂಪನದ ಕೇಂದ್ರ ಬಿಂದು 8 ಕಿ.ಮೀ.ಆಳದಲ್ಲಿದ್ದು, ಜಲಾಲಾಬಾದ್‌ನಿಂದ 27 ಕಿ.ಮೀ. ಪೂರ್ವ ಮತ್ತು ಈಶಾನ್ಯಕ್ಕೆ ಇತ್ತು ಎಂದು ವರದಿ ಹೇಳಿದೆ. ಹಲವು ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ 370 ಕಿ.ಮೀ. ದೂರದಲ್ಲಿ ಕಂಪನದ ಅನುಭವವಾಗಿದೆ ಎಂದು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಉಂಟಾದ ಭೂಕಂಪದ ಪರಿಣಾಮ ದೆಹಲಿ ಎನ್‌ಸಿಆರ್, ಪಾಕಿಸ್ತಾನ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಕಟ್ಟಡಗಳಲ್ಲಿ ಇದ್ದ ಜನರು ಹೊರಗೆ ಓಡಿ ಬಂದಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ.

ರೆಡ್‌ಕ್ರಾಸ್ ಸಂಸ್ಥೆ ಪೋಸ್ಟ್ ಹಾಕಿದ್ದು, ಅಫ್ಘಾನಿಸ್ತಾನದಲ್ಲಿ ಈ ಹಿಂದೆಯೂ ಹಲವು ಸಲ ಭೂಕಂಪವಾಗಿದೆ. ಹಿಂದೂ ಕುಶ್ ಪರ್ವತ ಶ್ರೇಣಿಯು ಭೌಗೋಳಿಕವಾಗಿ ಸಕ್ರಿಯವಾಗಿದ್ದು, ಪ್ರತಿ ವರ್ಷ ಹಲವಾರು ಲಘೂ ಭೂಕಂಪ ಸಂಭವಿಸುತ್ತದೆ ಎಂದು ಹೇಳಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್‌) ಭೂಕಂಪದ ಕೇಂದ್ರಬಿಂದು 34.50°N ಅಕ್ಷಾಂಶ ಮತ್ತು 70.81°E ರೇಖಾಂಶದಲ್ಲಿ, 160 ಕಿ.ಮೀ ಆಳದಲ್ಲಿದೆ ಎಂದು ಹೇಳಿದೆ. ಸ್ಥಳೀಯ ಮಾಧ್ಯಮಗಳು 250ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ತಿಳಿಸಿದೆ.

ಎನ್‌ಸಿಎಸ್‌ ಭೂಕಂಪವನ್ನು ಅವುಗಳ ಆಳವನ್ನು ಅವಲಂಬಿಸಿ ಅಳತೆ ಮಾಡಲಾಗುತ್ತದೆ. ಭೂಮಿಯ ಮೇಲ್ಮೈಗೆ ಹತ್ತಿರ ಅಥವಾ ಮಧ್ಯಮ ಆಳದ ಭೂಕಂಪಗಳು ಎಂಬ ವರ್ಗೀಕರಣವಿದೆ. ಭೂಮಿಯ ಮೇಲ್ಮೈಗೆ ಹತ್ತಿರ ಅಥವಾ ಮಧ್ಯಮ ಆಳದ ಭೂಕಂಪ ಹೆಚ್ಚು ಅಪಾಯಕಾರಿ, ಇವುಗಳ ಕಂಪನ ತರಂಗಗಳು ಮೇಲ್ಮೈಗೆ ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ

NO COMMENTS

LEAVE A REPLY

Please enter your comment!
Please enter your name here

Exit mobile version