ಸೈಬರ್ ವಂಚನೆ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಉಪಕ್ರಮ
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಹಾಗೂ ಮೊಬೈಲ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಇನ್ನು ಮುಂದೆ ದೇಶದಲ್ಲಿ ಮಾರಾಟವಾಗುವ ಎಲ್ಲ ಹೊಸ ಮೊಬೈಲ್‌ಗಳಲ್ಲೂ ಸೈಬರ್ ಸುರಕ್ಷತಾ ಆಪ್ ‘ಸಂಚಾರ್ ಸಾಥಿ’ ಆ್ಯಪ್ ಉಚಿತವಾಗಿ ಮತ್ತು ಕಡ್ಡಾಯವಾಗಿ ಇನ್ಸ್ಟಾಲ್ ಮಾಡುವಂತೆ ಸ್ಮಾರ್ಟ್‌ಪೋನ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಆಪಲ್, ಒಪ್ಪೊ, ವಿವೋ, ಶಯೋಮಿ, ಸ್ಯಾಮಸಂಗ್ ಕಂಪನಿಗಳು ತಮ್ಮ ಹೊಸ ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಪ್ರೀ ಇನ್ಸಾಟ್‌ಲ್ ಮಾಡಬೇಕು. ಈ ಕ್ರಮ ಅಳವಡಿಸಲು 90 ದಿನ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋನ್‌ಗಳಿಗೆ ಸಾಫ್ಟವೇರ್ ಅಪ್‌ಡೇಟ್ ಮೂಲಕ ಆ್ಯಪ್ ಸೇರಿಸಬೇಕೆಂದು ದೂರ ಸಂಪರ್ಕ ಇಲಾಖೆ ಆದೇಶಿಸಿದೆ.
ಗ್ರಾಹಕರು ಈ ಆಪ್‌ನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದೂ ತಿಳಿಸಲಾಗಿದೆ. ಪ್ರಸ್ತುತ ಈ ಆ್ಯಪ್ ವೆಬ್‌ಸೈಟ್‌ನಲ್ಲಿ ದೊರೆಯುತ್ತಿದ್ದು, ಅಗತ್ಯವಿದ್ದವರು ಅಳವಡಿಸಿಕೊಳ್ಳಬಹುದಾಗಿದೆ. ಇದೊಂದು ದೂರ ಸಂಪರ್ಕ ಇಲಾಖೆಯ ಗ್ರಾಹಕ ಕೇಂದ್ರಿತ ಉಪಕ್ರಮವಾಗಿದ್ದು, ಮೊಬೈಲ್ ಬಳಕೆದಾರರನ್ನು ಸಬಲೀಕರಣಗೊಳಿಸುತ್ತದೆ. ಅವರಿಗೆ ಭದ್ರತೆ ಮತ್ತು ಅವರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ್ ಸಾರಥಿ ವೆಬ್‌ಸೈಟ್‌ನಲ್ಲಿ ಆ್ಯಪ್ ಬಗ್ಗೆ ಮಾಹಿತಿ ನೀಡಲಾಗಿದೆ.
ನೀವು ಐಎಂಇಐ ಸಂಖ್ಯೆ ನೆನಪಿಟ್ಟುಕೊಳ್ಳಬೇಕಿಲ್ಲ: ಈಗ ನಿಮ್ಮ ಮೊಬೈಲ್ ಏನಾದರೂ ಕಳೆದುಹೋಯಿತೆಂದರೆ, ಆ ಉಪಕರಣದ ಐಎಂಇಐ ಸಂಖ್ಯೆ ನಿಮ್ಮ ಬಳಿ ಇರಬೇಕು. ಅದನ್ನು ನಮೂದಿಸಿಯೇ ದೂರು ನೀಡಬೇಕಾಗುತ್ತದೆ. ಸಂಚಾರ್ ಸಾರಥಿ ಆ್ಯಪ್ ಅಳವಡಿಸಿಕೊಂಡಿದ್ದೇ ಆದಲ್ಲಿ, ಅದರ ಜಾಲತಾಣವೇ ಐಎಂಇಐ ಸಂಖ್ಯೆಯನ್ನು ಗುರುತಿಟ್ಟುಕೊಂಡಿರುತ್ತದೆ.
ಇದುವರೆಗೆ 42 ಲಕ್ಷ ಮೊಬೈಲ್‌ಗಳು ಬ್ಲಾಕ್: ಸಂಚಾರ್ ಸಾರಥಿಯಲ್ಲಿ ಇದುವರೆಗೆ 42.14 ಲಕ್ಷ ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಕಳೆದು ಹೋದ 26.11 ಲಕ್ಷ ಮೊಬೈಲ್‌ಗಳನ್ನು ವೆಬ್‌ಸೈಟ್ ಮೂಲಕ ಪತ್ತೆ ಹಚ್ಚಲಾಗಿದೆ.
ಸಂಚಾರ್ ಸಾರಥಿಯ ಪ್ರಯೋಜನ ಏನು?: ಮೊಬೈಲ್ ಕಳ್ಳತನವಾದಾಗ ಅದನ್ನು ಈ ಆ್ಯಪ್ ಮೂಲಕ ಬ್ಲಾಕ್ ಮಾಡಬಹುದು. ಚಕ್ಷು ಎನ್ನುವ ಆ್ಯಪ್‌ನ್ ಮೂಲಕ ನಿಮ್ಮ ಮೊಬೈಲ್ ಸಂಪರ್ಕ ಕುರಿತ ಮಾಹಿತಿ ಒದಗಿಸುತ್ತದೆ. ಆರ್ಥಿಕ ವಂಚನೆ, ಸೈಬರ್ ಕ್ರೈಂ, ದುರುದ್ದೇಶಪೂರಿತ ಉದ್ದೇಶಗಳಿಗೆ ಶಂಕಿತ ವಂಚಕರಿಂದ ಬರುವ ಕರೆ, ವಾಟ್ಸಪ್ ಕಾಲ್, ಎಸ್‌ಎಂಎಸ್‌ಗಳನ್ನು ಗುರುತಿಸಿ ಎಚ್ಚರಿಸುತ್ತದೆ.
ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಟ್ರಾಯ್ ಅಧಿಕಾರಿಗಳು, ಹೂಡಿಕೆ ಸಲಹೆಗಾರರು, ಕೆವೈಸಿ ಮಾಹಿತಿ ಕೋರುವವರು ಎಂದು ಹೇಳಿಕೊಂಡು ಬರುವ ಕರೆ ಸತ್ಯಾಸತ್ಯಯನ್ನು ಗುರುತಿಸಿ ಬಳಕೆದಾರರಿಗೆ ವರದಿ ಮಾಡುತ್ತದೆ. ಎಸ್‌ಎಂಎಸ್, ಆರ್‌ಸಿಎಸ್, ಐಮೆಸೇಜ್ ಮೂಲಕ ಫಿಷಿಂಗ್ ಲಿಂಕ್, ಎಪಿಕೆ ಫೈಲ್, ಮೊಬೈಲ್ ಉಪಕರಣ ಕ್ಲೋನಿಂಗ್ ಯತ್ನವಾದಲ್ಲಿ ಬಳಕೆದಾರರು ವರದಿ ಮಾಡಬಹುದು.
