ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮೇ 2023ರಲ್ಲಿ ಭುಗಿಲೆದ್ದ ಜನಾಂಗೀಯ ಸಂಘರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರ ಶನಿವಾರ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.
ಈ ಭೇಟಿಯು ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಬಹುದೆಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮಿಜೋರಾಂನ ಐಜ್ವಾಲ್‌ನಿಂದ ಚುರಾಚಂದ್‌ಪುರ ಜಿಲ್ಲೆಗೆ ಆಗಮಿಸಲಿರುವ ಪ್ರಧಾನಿ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ₹7,300 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿ, ಶಾಂತಿ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
2023ರ ಮೇ ತಿಂಗಳಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ತೀವ್ರಗೊಂಡ ಹಿಂಸಾಚಾರದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಈ ಸಂಘರ್ಷ ಆರಂಭವಾದ ನಂತರ ಪ್ರಧಾನಿಯವರ ಇದು ಮೊದಲ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವಿಶೇಷವಾಗಿ, ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರವನ್ನು ಭೇಟಿಗೆ ಆಯ್ಕೆ ಮಾಡಿರುವುದು ಮಹತ್ವಪೂರ್ಣವಾಗಿದೆ. ಇದು ಸಂತ್ರಸ್ತರ ನೋವುಗಳಿಗೆ ಸ್ಪಂದಿಸುವ ಪ್ರಯತ್ನವಾಗಿ ಕಾಣುತ್ತಿದೆ.
ಭಿನ್ನ ನಿಲುವುಗಳು, ಬಹಿಷ್ಕಾರ ಮತ್ತು ಸ್ವಾಗತ: ಆರು ಪ್ರಮುಖ ಬಂಡುಕೋರ ಗುಂಪುಗಳ ಒಕ್ಕೂಟವಾದ ಕೋ-ಆರ್ಡಿನೇಷನ್ ಕಮಿಟಿ ಪ್ರಧಾನಿ ಭೇಟಿಗೆ ಸಂಪೂರ್ಣ ಬಂದ್ಗೆ ಕರೆ ನೀಡಿದೆ. ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಮತ್ತು ಅಸಮರ್ಥತೆ ಯನ್ನು ಹಿಂಸಾಚಾರಕ್ಕೆ ನೇರ ಕಾರಣ ಎಂದು ಕಾರ್‌ಕಾಂ ಆರೋಪಿಸಿದೆ. ಅಲ್ಲದೆ ಮಣಿಪುರವನ್ನು ಭಾರತದ ಮುಖ್ಯಭೂಮಿಯ ಜನಸಂಖ್ಯೆಯ ಪ್ರಾಬಲ್ಯವಿರುವ ಪ್ರದೇಶವಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯದಲ್ಲಿನ ಪ್ರಭಾವಿ ಕುಕಿ ಸಂಘಟನೆಗಳ ಒಕ್ಕೂಟವಾದ ಕುಕಿ-ಝೋ ಕೌನ್ಸಿಲ್ ಪ್ರಧಾನಿ ಭೇಟಿಯನ್ನು ಐತಿಹಾಸಿಕ ಮತ್ತು ಅಪೂರ್ವ ಎಂದು ಬಣ್ಣಿಸಿ ಸ್ವಾಗತಿಸಿದೆ. ಸುಮಾರು ನಾಲ್ಕು ದಶಕಗಳ ನಂತರ ಓರ್ವ ಭಾರತೀಯ ಪ್ರಧಾನಿ ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಂದ್‌ಪುರ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಕೆಝೆಡ್‌ಸಿ ನಾಯಕರು ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರತಿಕ್ರಿಯೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಣಿಪುರ ಭೇಟಿಯನ್ನು ಸ್ವಾಗತಿಸಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ಶುಕ್ರವಾರ ಹೇಳಿದ್ದಾರೆ. “ಮಣಿಪುರದಲ್ಲಿ ಬಹಳ ಸಮಯದಿಂದ ಸಮಸ್ಯೆ ಇದೆ, ಪ್ರಧಾನಿ ಅಲ್ಲಿಗೆ ಹೋಗುತ್ತಿರುವುದು ಒಳ್ಳೆಯದು” ಎಂದು ರಾಗಾ ಹೇಳಿದ್ದಾರೆ.
ಅದೇ ಸಮಯದಲ್ಲಿ, ದೇಶದಲ್ಲಿ ಮತಗಳ ಕಳ್ಳತನ ದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದರು. “ಮಣಿಪುರದಲ್ಲಿ ಸಮಸ್ಯೆ ಬಹಳ ದಿನಗಳಿಂದ ಇದೆ. ಪ್ರಧಾನಿ ಅಲ್ಲಿಗೆ ಹೋಗುತ್ತಿರುವುದು ಒಳ್ಳೆಯ ವಿಚಾರ.
ಆದರೆ ದೇಶದ ಪ್ರಮುಖ ವಿಷಯ ‘ಮತ ಕಳ್ಳತನ’ ಆಗಿದೆ. ಹರಿಯಾಣ, ಮಹಾರಾಷ್ಟ್ರದಲ್ಲಿ ಮತ ಕಳ್ಳತನ ನಡೆದಿದೆ. ಕರ್ನಾಟಕದ ಬಗ್ಗೆ ನಾವು ಪುರಾವೆ ನೀಡಿದ್ದೇವೆ. ಎಲ್ಲ ಕಡೆ ಜನರು ಮತ ಕಳ್ಳತನದ ಬಗ್ಗೆಯೇ ಹೇಳುತ್ತಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.