Home ಸುದ್ದಿ ದೇಶ EPFO ಭರ್ಜರಿ ಸಿಹಿಸುದ್ದಿ: ಪಿಂಚಣಿದಾರರಿಗೆ ‘ಮನೆ ಬಾಗಿಲಿಗೆ ಸೇವೆ’, ಏನಿದು ಹೊಸ ಅಪ್ಡೇಟ್ಸ್!

EPFO ಭರ್ಜರಿ ಸಿಹಿಸುದ್ದಿ: ಪಿಂಚಣಿದಾರರಿಗೆ ‘ಮನೆ ಬಾಗಿಲಿಗೆ ಸೇವೆ’, ಏನಿದು ಹೊಸ ಅಪ್ಡೇಟ್ಸ್!

0

ಕೇಂದ್ರ ಸರ್ಕಾರವು ಭವಿಷ್ಯ ನಿಧಿ (ಪಿಎಫ್) ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಸಭೆಯಲ್ಲಿ, ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಕನಿಷ್ಠ ಪಿಎಫ್ ಪಿಂಚಣಿಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದು ಪಿಂಚಣಿದಾರರಿಗೆ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ತಿಂಗಳಿಗೆ 1,000 ರೂ. ಇರುವ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವಂತೆ ಟ್ರೇಡ್ ಯೂನಿಯನ್ ಸದಸ್ಯರು ಒತ್ತಾಯಿಸಿದ್ದಾರೆ.

ಇದಲ್ಲದೆ ಪಿಎಫ್ ಹಣವನ್ನು ಹಿಂಪಡೆಯುವ ನಿಯಮಗಳನ್ನು ಸಡಿಲಗೊಳಿಸಲು ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿ ಸಮ್ಮತಿಸಿದೆ. ಇದರಿಂದ ಇಪಿಎಫ್‌ಒ ಚಂದಾದಾರರು ಇನ್ನು ಮುಂದೆ ಲಭ್ಯವಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿದೆ.

ಭಾಗಶಃ ಹಣ ಹಿಂಪಡೆಯಲು ಕನಿಷ್ಠ 12 ತಿಂಗಳ ಸೇವೆ ಸಾಕಾಗಲಿದೆ. ಅಲ್ಲದೆ, ಶಿಕ್ಷಣ ಅಥವಾ ಮದುವೆಯಂತಹ ನಿರ್ದಿಷ್ಟ ಕಾರಣಗಳಿಗಾಗಿ ಹೆಚ್ಚು ಹಣವನ್ನು ಪಡೆಯುವುದು ಸುಲಭವಾಗಲಿದೆ.

ಈ ಮೊದಲು, ಹಣ ಹಿಂಪಡೆಯಲು ನಿಖರವಾದ ಕಾರಣಗಳನ್ನು ನಮೂದಿಸಬೇಕಾಗಿತ್ತು, ಆದರೆ ಈಗ ಯಾವುದೇ ಕಾರಣ ನೀಡದೆ ಅರ್ಜಿ ಸಲ್ಲಿಸಬಹುದು. ಇದು ನೌಕರರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ. ಸಭೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಹೆಚ್ಚಿನ ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆಯೂ ಚರ್ಚಿಸಲಾಯಿತು.

ಕಾರ್ಮಿಕ ಪ್ರತಿನಿಧಿಗಳು, ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಪಿಎಫ್‌ಒ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

ಪಿಂಚಣಿದಾರರಿಗೆ ಮತ್ತೊಂದು ಸಂತಸದ ಸುದ್ದಿ ಎಂದರೆ, ಇಪಿಎಸ್-95 ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜೊತೆ ಒಪ್ಪಂದ ಮಾಡಿಕೊಳ್ಳಲು ಸಿಬಿಟಿ ಅನುಮೋದನೆ ನೀಡಿದೆ.

ಪ್ರತಿ ಪ್ರಮಾಣಪತ್ರಕ್ಕೆ 50 ರೂಪಾಯಿ ವೆಚ್ಚವಾಗಲಿದ್ದು, ಇದನ್ನು ಸಂಪೂರ್ಣವಾಗಿ ಇಪಿಎಫ್‌ಒ ಭರಿಸಲಿದೆ. ಈ ಸೌಲಭ್ಯವು ವಿಶೇಷವಾಗಿ ಹಿರಿಯ ಪಿಂಚಣಿದಾರರಿಗೆ ತುಂಬಾ ಸಹಾಯಕವಾಗಲಿದೆ, ಏಕೆಂದರೆ ಅವರು ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಬ್ಯಾಂಕ್ ಅಥವಾ ಇಪಿಎಫ್‌ಒ ಕಚೇರಿಗಳಿಗೆ ಭೇಟಿ ನೀಡಬೇಕಾಗಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version