ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದಲ್ಲಿ ಭಾರೀ ಬೆಳವಣಿಗೆಯಾಗಿದೆ. ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣ ರಾಜ್ಯದ ರಾಜಕೀಯದಲ್ಲಿ ಪಕ್ಷದ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಕೆ.ಕವಿತಾರನ್ನು ತಂದೆ ಕೆ. ಚಂದ್ರಶೇಖರ್ ರಾವ್ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯಿಂದ ಅಮಾನತುಗೊಳಿಸಿದ್ದರು. ಬುಧವಾರ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ. ವಿತಾ ಬಿಆರ್‌ಎಸ್ ಪಕ್ಷಕ್ಕೆ ಸಹ ರಾಜೀನಾಮೆ ನೀಡಿದ್ದಾರೆ.
ಬಿಆರ್‌ಎಸ್ ಪಕ್ಷದ ಹಿರಿಯ ನಾಯಕರು ಮತ್ತು ಸಂಬಂಧಿಯೂ ಆದ ಟಿ.ಹರೀಶ್ ರಾವ್ ವಿರುದ್ಧ ಕೆ.ಕವಿತಾ ತೀವ್ರ ಟೀಕೆಗಳನ್ನು ಮಾಡಿದ್ದರು. ಸ್ಫೋಟಕ ಹೇಳಿಕೆಗಳನ್ನು ನೀಡಿದ್ದರು. ಆದ್ದರಿಂದ ಅವರನ್ನು ಪಕ್ಷದಿಂದ ಮಂಗಳವಾರ ಅಮಾನತುಗೊಳಿಸಲಾಗಿತ್ತು.
ಎಂಎಲ್‌ಸಿಯಾಗಿದ್ದ ಕೆ.ಕವಿತಾ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಆರ್‌ಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ರಾಜೀನಾಮೆ ಕೊಟ್ಟಿದ್ದಾರೆ. ಈ ಬೆಳವಣಿಗೆ ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
“ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಸಹೋದರ ಕೆ.ಟಿ.ರಾಮರಾವ್ ಕೆಸಿಆರ್ ಆರೋಗ್ಯ ನೋಡಿಕೊಳ್ಳಲಿ ಮತ್ತು ಪಕ್ಷದ ಕಾರ್ಯಕರ್ತರ ಹಿತ ಕಾಪಾಡಲಿ ಎಂದು ಒತ್ತಾಯಿಸುತ್ತೇನೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ “ಕೆ.ಚಂದ್ರಶೇಖರರಾವ್ ತಮ್ಮ ಸ್ಪೂರ್ತಿ” ಎಂದು ಹೇಳಿದ ಕವಿತಾ, ತೆಲಗಾಂಣದ ದಲಿತರು, ಹಿಂದುಳಿದ ವರ್ಗಗಳ ಪರವಾಗಿ ನಿಂತು ಅವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಕೆ.ಕವಿತಾ, “ತಮ್ಮನ್ನು ಗುರಿಯಾಗಿಸಿಕೊಂಡು ಪಕ್ಷದೊಳಗೆ ಪಿತೂರಿಗಳು ನಡೆದಿವೆ. ಪಕ್ಷದ ಕಚೇರಿಯಿಂದಲೇ ನನ್ನ ವಿರುದ್ಧ ಸುಳ್ಳು ಪ್ರಚಾರವನ್ನು ಮಾಡಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.
“ನಾನು ಸಹೋದರನಿಗೆ ಈ ಕುರಿತು ಮಾಹಿತಿ ನೀಡಿದೆ. ನನ್ನ ಸ್ವಂತ ಸಹೋದರ, ಕಾರ್ಯಾಧ್ಯಕ್ಷರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಪರಿಸ್ಥಿತಿ ನನಗೆ ಅರ್ಥವಾಯಿತು” ಎಂದು ಕೆ.ಕವಿತಾ ಹೇಳಿದರು.
“ಹರೀಶ್ ರಾವ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಪಿತೂರಿ ನಡೆಸಿದ್ದಾರೆ. ಹರೀಶ್ ರಾವ್ ದೆಹಲಿ ಪ್ರವಾಸದ ಸಮಯದಲ್ಲಿ ರೇವಂತ್ ಅವರ ಪಾದಗಳನ್ನು ಹಿಡಿದಾಗ, ಈ ಪಿತೂರಿಗಳು ಪ್ರಾರಂಭಗೊಂಡವು” ಎಂದು ಕವಿತಾ ಆರೋಪ ಮಾಡಿದರು.
“ಹರೀಶ್ ರಾವ್ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರೊಂದಿಗೆ ಹಿಂದೆ ಸಂಬಂಧ ಹೊಂದಿದ್ದರು. ಅವರು ಪಕ್ಷದ ಟ್ರಬಲ್ ಶೂಟರ್ ಅಲ್ಲ ಡಬಲ್ ಶೂಟರ್” ಎಂದು ಕವಿತಾ ಟೀಕಿಸಿದರು.
“ಕಾಳೇಶ್ವರಂ ಯೋಜನೆಯ ಸುತ್ತಲೂ ಭ್ರಷ್ಟಾಚಾರವನ್ನು ಹರೀಶ್ ರಾವ್ ನಡೆಸಿದ್ದಾರೆ. ಈ ಹಣವನ್ನು ಅವರು ಶಾಸಕರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸಿದ್ದಾರೆ ಮತ್ತು ಈತಲ ರಾಜೇಂದರ್, ಮೈನಂಪಲ್ಲಿ ಹನುಮಂತ ರಾವ್ ಮತ್ತು ವಿಜಯಶಾಂತಿ ಅವರಂತಹ ಹಿರಿಯ ನಾಯಕರ ವಿರುದ್ಧವೂ ಸಂಚು ರೂಪಿಸಿದ್ದಾರೆ” ಎಂದು ಆರೋಪಿಸಿದರು.