Home ಸುದ್ದಿ ದೇಶ ಅಸ್ಥಿರ ನೆರೆಹೊರೆ ದೇಶಗಳು

ಅಸ್ಥಿರ ನೆರೆಹೊರೆ ದೇಶಗಳು

0

75ನೇ ಸ್ವಾತಂತ್ರ್ಯದ ಹೊಸ್ತಿಲಲ್ಲಿರುವ ಭಾರತ ಜಗತ್ತಿನ ಅತ್ಯಂತ ಬಲಿಷ್ಠ ಹಾಗೂ ಸುಸ್ಥಿರ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದೇ ವೇಳೆ ನೆರೆಯ ರಾಷ್ಟ್ರಗಳಾದ ನೇಪಾಳ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ರಾಜಕೀಯ ಅಸ್ಥಿರತೆ, ಆರ್ಥಿಕ ದಿವಾಳಿತನ, ಸರ್ಕಾರದ ವಿರುದ್ಧ ಪ್ರಜೆಗಳ ಆಕ್ರೋಶ, ಆಂತರಿಕ ಬಿಕ್ಕಟ್ಟುಗಳಿಂದ ದಂಗೆಗಳು ಉಂಟಾಗಿ ಅರಾಜಕತೆ ಸೃಷ್ಟಿಯಾಗಿದೆ. ಕಾಠ್ಮಂಡುವಿನಿಂದ ಕಾಬೂಲ್‌ವರೆಗೂ ಅಶಾಂತಿ ನಿರ್ಮಾಣವಾಗಲು ಕಾರಣವೇನು? ಸಾಮಾಜಿಕ ಸವಾಲುಗಳನ್ನು ಎದುರಿಸಲಾಗದೇ ಸರ್ಕಾರಗಳೇ ಪತನವಾಗಿದ್ದು ಯಾಕೆ? ಈ ಎಲ್ಲಾ ದೇಶಗಳ ಅರಾಜಕತೆಗೆ ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.

2021 ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತ: ಅಗಸ್ಟ್ 15, 2021ರಂದು ಅಫ್ಘಾನಿಸ್ತಾನದ ಇತಿಹಾಸದಲ್ಲಿ ಮತ್ತೆ ಕರಿನೆರಳು ಆಕ್ರಮಿಸಿದ ದಿನ. ಎರಡು ದಶಕಗಳ ಬಳಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂಪಡೆದುಕೊಂಡಿತು. ಈ ನಿರ್ಗಮನದ ಬಳಿಕ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿತು. ತಾಲಿಬಾನ್ ತನ್ನ ಆಡಳಿತ ಪುನಾರಂಭಿಸುವ ಮೂಲಕ ಮಹಿಳೆಯರಿಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಉದ್ಯೋಗ, ವಿದ್ಯಾಭ್ಯಾಸದ ಹಕ್ಕು ಮೊಟಕುಗೊಳಿಸಲಾಯಿತು. ಆರ್ಥಿಕವಾಗಿ ಮೊದಲೇ ದಿವಾಳಿಯ ಅಂಚಿನಲ್ಲಿದ್ದ ದೇಶ, ಸಂಪೂರ್ಣವಾಗಿ ನೆಲಕಚ್ಚಿತು. ಪ್ರಜೆಗಳು ಅಫ್ಘಾನಿಸ್ತಾನ ತೊರೆದು ಬೇರೆ ದೇಶಗಳಿಗೆ ವಲಸೆ ಹೋದರು.

2022 ಶ್ರೀಲಂಕಾ: ಆರ್ಥಿಕ ದಿವಾಳಿತನ ರಾಜಕೀಯದಲ್ಲಿ ಬಿರುಗಾಳಿ: ಕೋವಿಡ್-19 ಮಾರಿಯಿಂದ ಹೆಚ್ಚಿನ ಹೊಡೆತ ಬಿದ್ದ ಕ್ಷೇತ್ರವೆಂದರೆ ಪ್ರವಾಸೋದ್ಯಮ. ಇದರಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಯಿತು. ಸ್ವಾತಂತ್ರ್ಯಾನಂತರ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಅಲ್ಲಿನ ದುರ್ಬಲ ನೀತಿ, ಅತಿಯಾದ ಸಾಲದಿಂದಾಗಿ ಶ್ರೀಲಂಕಾದಲ್ಲಿ ಹಣದುಬ್ಬರ ಉಂಟಾಯಿತು. ಆಹಾರ, ಔಷಧಿ, ಮತ್ತು ದಿನನಿತ್ಯ ಜೀವನದ ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಜನರ ಪರದಾಡುವಂತಾಯಿತು. ಇದರಿಂದಾಗಿ ರೋಸಿಹೋದ ಜನರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಅಧ್ಯಕ್ಷರ ನಿವಾಸ ಅಗ್ನಿಗಾಹುತಿಯಾಯಿತು. ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸಾ ಮತ್ತು ಪ್ರಧಾನಿ ಮಹೀಂದ್ರ ರಾಜಪಕ್ಸಾ ರಾಜೀನಾಮೆ ನೀಡಿದ್ದರು. ಗೊಟಬಯಾ ದೇಶ ಬಿಟ್ಟು ಪರಾರಿಯಾಗಬೇಕಾಯಿತು.

2024 ಬಾಂಗ್ಲಾದೇಶ: ವಿದ್ಯಾರ್ಥಿಗಳ ಆಕ್ರೋಶಕ್ಕೆ ಸರ್ಕಾರ ಪತನ: ಪಾಕಿಸ್ತಾನದಿಂದ ಬೇರ್ಪಟ್ಟ ಬಳಿಕ ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆ 2024ರಲ್ಲಿ ಸಂಭವಿಸಿತು. ಬಾಂಗ್ಲಾದಲ್ಲಿ ವ್ಯಾಪಕ ವಿದ್ಯಾರ್ಥಿ ಚಳುವಳಿಯ ಪರಿಣಾಮವಾಗಿ ಅಂದಿನ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನವಾಯಿತು. ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದುಕೊಳ್ಳಬೇಕಾಯಿತು. ಮೂಲಭೂತವಾದಿಗಳ ಮೇಲುಗೈನಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯಿತು. ಹಸೀನಾ ಸರ್ಕಾರ ಸಾಮಾಜಿಕ ಜಾಲತಾಣದಗಳನ್ನು ನಿರ್ಬಂಧಿಸಿ ಪ್ರತಿಭಟನೆ ಹತ್ತಿಕ್ಕಲು ಮುಂದಾದಾಗ ದೇಶಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಅದಾದ ನಂತರ ಇನ್ನೂ ಅಲ್ಲಿ ಚುನಾವಣೆ ನಡೆದು, ಪ್ರಜಾ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ.

2025 ನೇಪಾಳದಲ್ಲಿ ಜೆನ್ ಝಿ ದಂಗೆ: ಅಗ್ನಿತಾಂಡವ: ಇತ್ತಿಚೆಗೆ ಅಲ್ಲಿನ ಸರ್ಕಾರ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಶುರುವಾದ ಜೆನ್ ಝಿ ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ತಿರುಗಿ ಕಳೆದೆರೆಡು ದಿನಗಳಿಂದ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಪ್ರಧಾನಿ ಒಲಿ ಶರ್ಮಾ ಸೇರಿದಂತೆ ಅಧ್ಯಕ್ಷರೂ ರಾಜೀನಾಮೆ ನೀಡಿದ್ದಾರೆ.

ಪ್ರತಿಭಟನೆಗಳಲ್ಲಿ ಬಲಿಯಾದವರು
ಅಫ್ಘಾನಿಸ್ತಾನ:
1095 ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಶ್ರೀಲಂಕಾ: ಸರ್ಕಾರದ ವಿರುದ್ಧದ ಪ್ರತಿಭಟನೇಲಿ 8 ಜನರ ಸಾವು
ಬಾಂಗ್ಲಾದೇಶ: ವಿದ್ಯಾರ್ಥಿಗಳ ದಂಗೆಗೆ 622 ಜನರು ಮೃತ್ಯು
ನೇಪಾಳ: ಈವರೆಗೂ 29 ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ

NO COMMENTS

LEAVE A REPLY

Please enter your comment!
Please enter your name here

Exit mobile version