Home ಸುದ್ದಿ ದೇಶ ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ

ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ

0

ನವದೆಹಲಿ: ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಘಟನೆ ಕುರಿತಂತೆ ದೇಶವ್ಯಾಪಿ ಚರ್ಚೆ ಮುಂದುವರಿದಿದೆ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು ಎಂಬ ಬೇಡಿಕೆಯನ್ನು ಕರ್ನಾಟಕದ ಹಲವಾರು ಪ್ರಮುಖ ಮಠಾಧೀಶರು ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ರೂಪಗೊಂಡಿದ್ದ ಸನಾತನ ಸಂತ ನಿಯೋಗ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿಯಾಯಿತು. ನಿಯೋಗವು ಪ್ರಕರಣದ ಗಂಭೀರತೆ, ರಾಜ್ಯದಲ್ಲಿ ಉಂಟಾಗಿರುವ ಆತಂಕ ಮತ್ತು ನ್ಯಾಯಸಮ್ಮತ ತನಿಖೆಯ ಅಗತ್ಯತೆಯನ್ನು ಒತ್ತಿ ಹೇಳಿದೆ.

ಈ ನಿಯೋಗದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿ ರಾಜ್ಯದ ವಿವಿಧ ಪೀಠಗಳಿಂದ ಬಂದಿದ್ದ 8 ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಅವರು ಪ್ರಕರಣ ಸ್ಥಳೀಯ ಮಟ್ಟದಲ್ಲಿ ತನಿಖೆ ಮುಂದುವರಿಸಿದರೂ ಜನರಲ್ಲಿ ವಿಶ್ವಾಸ ಮೂಡಿಸಲು ಎನ್‌ಐಎ ಮಟ್ಟದ ತನಿಖೆಯೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳು, “ಈ ಪ್ರಕರಣ ಕೇವಲ ಒಂದು ವ್ಯಕ್ತಿಗಷ್ಟೇ ಸಂಬಂಧಪಟ್ಟದ್ದಲ್ಲ. ಇದು ಸಮಾಜದಲ್ಲಿ ಅಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಹೀಗಾಗಿ ಸತ್ಯ ಹೊರಬರುವಂತೆ ತಕ್ಷಣ ಎನ್‌ಐಎ ತನಿಖೆಗೆ ಒಪ್ಪಿಸಬೇಕು,” ಎಂದು ಮನವಿ ಸಲ್ಲಿಸಿದ್ದಾರೆ.

ಅಮಿತ್ ಶಾ ಅವರು ಸ್ವಾಮೀಜಿಗಳ ಮನವಿಯನ್ನು ಶ್ರದ್ಧೆಯಿಂದ ಆಲಿಸಿ, ಕೇಂದ್ರ ಸರ್ಕಾರವು ಎಲ್ಲಾ ಆಯಾಮಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಭೇಟಿಯಿಂದ ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈಗ ರಾಜ್ಯ ಹಾಗೂ ಕೇಂದ್ರದ ರಾಜಕೀಯ ವಲಯದಲ್ಲೂ ಈ ಕುರಿತು ಚರ್ಚೆ ಹೆಚ್ಚುವ ನಿರೀಕ್ಷೆ ಇದೆ.

NO COMMENTS

LEAVE A REPLY

Please enter your comment!
Please enter your name here

Exit mobile version