ನವದೆಹಲಿ: ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೊಮ್ಮೆ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ. 51.50 ಇಳಿಕೆ ಮಾಡಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿವೆ. ಈ ಇಳಿಕೆಯಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸಿಲಿಂಡರ್ ಬಳಸುವವರಿಗೆ ಸ್ವಲ್ಪ ಮಟ್ಟಿನ ಹಿತವಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್: ಸಾಮಾನ್ಯ ಜನರ ಅಡುಗೆಮನೆಗೆ ಸಂಬಂಧಿಸಿದ 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಳಿಕೆಯ ಹಿನ್ನಲೆ: ಅಂತರರಾಷ್ಟ್ರೀಯ ಇಂಧನ ಬೆಲೆ ಏರಿಳಿತ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತಗಳನ್ನು ಆಧರಿಸಿ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ದರಗಳನ್ನು ಪ್ರತಿ ತಿಂಗಳು ಮೊದಲನೆ ದಿನ ಪರಿಷ್ಕರಿಸುತ್ತವೆ. ಈ ಹಿಂದೆ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 33.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ 1 ರಂದು 58.50 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹಾಗೂ ಎಲ್‌ಪಿಜಿ ಆಮದು ದರಗಳಲ್ಲಿ ಕಂಡುಬಂದ ವ್ಯತ್ಯಾಸದ ಪರಿಣಾಮ ಈ ಬಾರಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಹಳೆಯ ಮತ್ತು ಹೊಸ ಬೆಲೆ
ದೆಹಲಿ: ರೂ. 1,676 ರಿಂದ ರೂ. 1,624.50 ಕ್ಕೆ ಇಳಿಕೆ
ಮುಂಬೈ: ರೂ. 1,629 ರಿಂದ ರೂ. 1,577.50 ಕ್ಕೆ ಇಳಿಕೆ
ಕೋಲ್ಕತ್ತಾ: ರೂ. 1,789 ರಿಂದ ರೂ. 1,737.50 ಕ್ಕೆ ಇಳಿಕೆ
ಚೆನ್ನೈ: ರೂ. 1,841.50 ರಿಂದ ರೂ. 1,790 ಕ್ಕೆ ಇಳಿಕೆ
ಗೃಹ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ
ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ಸರ್ಕಾರ ನಿಯಂತ್ರಿಸುತ್ತದೆ. ಸದ್ಯ ದೆಹಲಿಯಲ್ಲಿ ಇದರ ಬೆಲೆ ರೂ. 803.75, ಮುಂಬೈನಲ್ಲಿ ರೂ. 802.50, ಕೋಲ್ಕತ್ತಾದಲ್ಲಿ ರೂ. 829, ಚೆನ್ನೈನಲ್ಲಿ ರೂ. 818.50 ಆಗಿದೆ. ಈ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಗ್ರಾಹಕರ ಪ್ರತಿಕ್ರಿಯೆ
ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಈ ಇಳಿಕೆ ಸ್ವಲ್ಪ ಮಟ್ಟಿಗೆ ಸಹಾಯವಾದರೂ ಗೃಹ ಬಳಕೆಯ ಸಿಲಿಂಡರ್ ದರ ಕೂಡ ಕಡಿಮೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಕುಟುಂಬಗಳ ಮೇಲಿನ ಒತ್ತಡ ಇನ್ನೂ ಮುಂದುವರಿದಿದೆ.