Home ಸುದ್ದಿ ದೇಶ ರಾಷ್ಟ್ರ ರಾಜಧಾನಿಯಲ್ಲಿ ಕಾರು ಸ್ಫೋಟ: 9 ಜನ ಸಾವು

ರಾಷ್ಟ್ರ ರಾಜಧಾನಿಯಲ್ಲಿ ಕಾರು ಸ್ಫೋಟ: 9 ಜನ ಸಾವು

0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಸೋಮವಾರ ನಡೆದಿದೆ. ಜಮ್ಮು ಕಾಶ್ಮೀರ ಪೊಲೀಸರು ದೆಹಲಿಯಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಬೆನ್ನಲೇ ಸ್ಫೋಟ ಸಂಭವಿಸಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ.1ರ ಬಳಿ ಕಾರು ಸ್ಫೋಟ ಸಂಭವಿಸಿದೆ. ಈ ನಂತರ ಪಕ್ಕದಲ್ಲೇ ಇದ್ದ ಮೂರರಿಂದ ನಾಲ್ಕು ವಾಹನಗಳು ಬೆಂಕಿಗಾಹುತಿ ಆಗಿದೆ. ಚಾಂದಿನಿ ಚೌಕ್ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟಗೊಂಡ ಮಾಹಿತಿ ಬಂದ ತಕ್ಷಣವೇ ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು. ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಈ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಧಾವಿಸಿದ ದೆಹಲಿ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅದಾಗ್ಯೂ 8 ಜನರು ಆಸ್ಪತ್ರೆ ತಲುಪುವಷ್ಟರೊಳಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬೆನ್ನಲ್ಲೇ ರಾಷ್ಟçರಾಜಧಾನಿ ದೆಹಲಿ, ಮುಂಬೈ, ಉತ್ತರಪ್ರದೇಶ, ಬೆಂಗಳೂರು ಸೇರಿ ಎಲ್ಲ ಮಹಾನಗರಗಳಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.

ದೆಹಲಿಯಲ್ಲಿ ಕಾರು ಸ್ಫೋಟಗೊಂಡು 8 ಜನರು ಮೃತಪಟ್ಟ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಎನ್‌ಎಸ್‌ಜಿ, ಎನ್‌ಐಎ ಮತ್ತು ವಿಧಿವಿಜ್ಞಾನ ತಜ್ಞರನ್ನು ನಿಯೋಜಿಸುವಂತೆ ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಗೂ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಹೈ ಅಲರ್ಟ್: ದೆಹಲಿ ಕಾರು ಸ್ಫೋಟದ ಬೆನ್ನಲ್ಲೇ ದೇಶವ್ಯಾಪಿ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಭದ್ರತಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಸೂಕ್ಷ್ಮ ಜಿಲ್ಲೆಗಳು ಹಾಗೂ ಸ್ಥಳಗಳಲ್ಲಿ ಪೊಲೀಸರು ಜಾಗರೂಕರಾಗಿರಬೇಕು. ಸಾಮಾಜಿಕ ಮಾಧ್ಯಮ ಹಾಗೂ ವದಂತಿಗಳ ಕುರಿತೂ ಮೇಲ್ವಿಚಾರಣೆ ನಡೆಸಬೇಕು. ಡ್ರೋನ್ ಹಾಗೂ ಕಣ್ಣಾವಲಿನಂತಹ ತಾಂತ್ರಿಕ ಚಟುವಟಿಕೆಗಳ ಮೇಲೂ ನಿಗಾವಿಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಕೀತು ಮಾಡಿದರು.

ಸ್ಥಳಕ್ಕೆ ಅಮಿತ್ ಶಾ ದೌಡು, ಮಾಹಿತಿ ಪಡೆದ ಮೋದಿ: ಸ್ಫೋಟ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಗೆ ಧಾವಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಸ್ಫೋಟ ಸಂಭವಿಸಿದ ಕೆಂಪುಕೋಟೆ ಬಳಿಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ಸಂತಾಪ ವ್ಯಕ್ತಪಡಿಸಿ, ಅಮಿತ್ ಶಾ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕರ್ನಾಟಕದಲ್ಲೂ ಕಟ್ಟೆಚ್ಚರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಾರ್ವಜನಿಕ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಉನ್ನತ ಮಟ್ಟದ ಭದ್ರತೆ ಕಾಯ್ದುಕೊಳ್ಳಲು ನಿರ್ದೇಶನ ನೀಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version