Home ಸುದ್ದಿ ದೇಶ ರಾಜಧಾನಿಯಲ್ಲಿ 4.5 ಲಕ್ಷ ನಾಯಿ ನಿರ್ವಹಣೆ ಸಂಕಷ್ಟ

ರಾಜಧಾನಿಯಲ್ಲಿ 4.5 ಲಕ್ಷ ನಾಯಿ ನಿರ್ವಹಣೆ ಸಂಕಷ್ಟ

0

ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ವ್ಯಾಪ್ತಿಯಲ್ಲಿರುವ 4.5 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.

ರಾಜಧಾನಿಯಲ್ಲಿ ಹೆಚ್ಚಾದ ಬೀದಿ ನಾಯಿಗಳ ದಾಳಿಯ ಹಿನ್ನೆಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ಅಧಿಕಾರಿಗಳು ಅಲೆಮಾರಿ ನಾಯಿಗಳ ಸಂಖ್ಯೆಯ ಏರಿಕೆಗೆ ಕಾರಣವಾದ ಅಂಶಗಳು ಮತ್ತು ಸಮಸ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದರು.

ಬೀದಿ ನಾಯಿಗಳು ಉತ್ತಮ ಆಹಾರ ಮತ್ತು ಹವಾಮಾನದಿಂದ ಬದುಕುಳಿದು ವರ್ಷಪೂರ್ತಿ ತನ್ನ ಸಂತತಿ ಹೆಚ್ಚಿಸುತ್ತಿದೆ ಎಂದು ಸರ್ವೋದಯ ಸೇವಾಭಾವಿ ಸಂಸ್ಥೆಯ ಸ್ಥಾಪಕ ಮತ್ತು ಪಶುವೈದ್ಯ ಡಾ. ಅಕ್ಷಯ ಪ್ರಕಾಶ್ ಹೇಳಿದರು. ಬೀದಿ ನಾಯಿಗಳು ವರ್ಷಪೂರ್ತಿ 6-8 ಮರಿಗಳನ್ನೊಳಗೊಂಡ ಗುಂಪುಗಳನ್ನು ಉತ್ಪತ್ತಿ ಮಾಡುತ್ತವೆ.

ಉತ್ತಮ ಆಹಾರ ಮತ್ತು ಅನುಕೂಲಕರ ಹವಾಮಾನವು ಅವುಗಳ ಆರೋಗ್ಯವನ್ನು ಕಾಪಾಡಿ ಸಂತಾನ ಉತ್ತೇಜಿಸುತ್ತದೆ. ದೇಶದ ಇತರ ಭಾಗಗಳಲ್ಲಿ ಉಗ್ರ ಬಿಸಿಲು ಅಥವಾ ಚಳಿ ಇರುವ ಕಾಲದಲ್ಲಿ ಮಾತ್ರ ಪ್ರಜನನ ನಡೆಯುತ್ತದೆ, ಅಲ್ಲಿ ಮರಿಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ವಿವರಿಸಿದರು.

ಸಾಕಿದ ನಾಯಿಯೂ ರಸ್ತೆಗೆ: ನಗರದ ಜನರು ವಿದೇಶಕ್ಕೆ ತೆರಳುವಾಗ ತಾವು ಸಾಕಿದ ನಾಯಿಯನ್ನು ಅಲ್ಲಿಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಅವುಗಳನ್ನು ರಸ್ತೆಯಲ್ಲೇ ಬಿಡುತ್ತಾರೆ. ಪಕ್ಕದ ರಾಜ್ಯಗಳಿಂದ ಬರುವ ನಿರ್ಮಾಣ ಕಾರ್ಮಿಕರೂ ಸಹ ಈ ಸಮಸ್ಯೆಗೆ ಕಾರಣರಾಗಿದ್ದಾರೆ.

ಅವರು ಬೆಂಗಳೂರಿಗೆ ಬಂದಾಗ ಒಂದು ಅಥವಾ 2 ಮರಿಗಳನ್ನು ತರುತ್ತಾರೆ. ಆದರೆ ಕಟ್ಟಡ ಕಾಮಗಾರಿ ಮುಗಿಯುವ ವೇಳೆಗೆ ಅವು ದೊಡ್ಡದಾಗಿ ಬೆಳೆದಿರುತ್ತವೆ. ಹೀಗಾಗಿ ಅವುಗಳನ್ನು ಕರೆದೊಯ್ಯಲು ಸಾಧ್ಯವಾಗದೆ ರಸ್ತೆಯಲ್ಲೇ ಬಿಡುತ್ತಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, 2021ರಿಂದ ಈವರೆಗೆ ಬೆಂಗಳೂರು ನಗರದಲ್ಲಿ 40 ರೇಬೀಸ್ ಸಾವುಗಳು ಮತ್ತು 58,600 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version