Goa NightClub: ಉತ್ತರ ಗೋವಾದ ಜನಪ್ರಿಯ ಪಾರ್ಟಿ ತಾಣವೊಂದರಲ್ಲಿ ಶನಿವಾರ ತಡರಾತ್ರಿ ಅಗ್ನಿ ಸ್ಪೋಟಗೊಂಡಿದೆ. ಹಾಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ತಡರಾತ್ರಿ ತಿಳಿದು ಬಂದಿದೆ.
ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್ಪೊರಾ ಗ್ರಾಮದ ‘ಬಿರ್ಚ್ ಬೈ ರೊಮಿಯೊ ಲೇನ್’ ನೈಟ್‌ಕ್ಲಬ್‌ನಲ್ಲಿ ಈ ದುರಂತ ಸಂಭವಿಸಿದೆ. ಪೊಲೀಸರ ತನಿಖೆ ಪ್ರಕಾರ, ಈ ಬೆಂಕಿ ಅನಾಹುತಕ್ಕೆ ಸಿಲಿಂಡರ್ ಸ್ಫೋಟ ಕಾರಣ.
ಆದರೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯು ಆತಂಕಕಾರಿ ಸನ್ನಿವೇಶವನ್ನು ಅನಾವರಣಗೊಳಿಸಿದೆ. ದುರಂತ ಸಂಭವಿಸಿದ ಸಂದರ್ಭದಲ್ಲಿ ಡ್ಯಾನ್ಸ್ ಫ್ಲೋರ್‌ನಲ್ಲಿ ಕನಿಷ್ಠ 100 ಮಂದಿ ಪ್ರವಾಸಿಗರು ಮತ್ತು ಕ್ಲಬ್ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಹೈದರಾಬಾದ್‌ನ ಪ್ರವಾಸಿ ಫಾತಿಮಾ ಶೇಖ್ ಮಾಹಿತಿ ಪ್ರಕಾರ, “ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಜನರು ಸೇರಿದ್ದರು. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲರೂ ಅಡ್ಡಾದಿಡ್ಡಿಯಾಗಿ ಓಡತೊಡಗಿದರು. ಹೊರಗೆ ಹೋಗಿ ನೋಡಿದಾಗ ಇಡೀ ಕ್ಲಬ್‌ಗೆ ಬೆಂಕಿ ಆವರಿಸಿತ್ತು ಎಂದು ಹೇಳಿದರು.”
ಸಿಬ್ಬಂದಿಯೇ ಹೆಚ್ಚು ಬಲಿ: ದುರಂತದಲ್ಲಿ ಮೃತಪಟ್ಟ 25 ಮಂದಿಯಲ್ಲಿ ಹೆಚ್ಚಿನವರು ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಲಬ್‌ನ ಸಿಬ್ಬಂದಿ ಎನ್ನಲಾಗಿತ್ತಿದೆ.
ಹಾಗೇ ಒಬ್ಬ ಪ್ರತ್ಯಕ್ಷದರ್ಶಿಯ ಪ್ರಕಾರ, “ಬೆಂಕಿ ಕಾಣಿಸಿಕೊಂಡಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜನರು, ತಪ್ಪಾಗಿ ಅಡುಗೆ ಕೋಣೆಯತ್ತ ಓಡಿಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡರು.
ಹೆಚ್ಚಿನ ಮಂದಿ ಕೆಳ ಮಹಡಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿರಬಹುದು” ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ. ಮೃತರ ಪೈಕಿ ಮೂರರಿಂದ ನಾಲ್ವರು ಪ್ರವಾಸಿಗರು ಹಾಗೂ ಮೂವರು ಮಹಿಳೆಯರು ಎಂದು ಗುರುತಿಸಲಾಗಿದೆ.
ಕಿರಿದಾದ ದಾರಿ, ತಾತ್ಕಾಲಿಕ ರಚನೆ: ದುರಂತ ಸಂಭವಿಸಲು ಕ್ಲಬ್‌ನ ರಚನೆಯೇ ಕಾರಣ ಎಂದು ಹೇಳಲಾಗಿದೆ. ಕ್ಲಬ್ ತಾಳೆ ಎಲೆಗಳಿಂದ ನಿರ್ಮಿಸಲಾದ ತಾತ್ಕಾಲಿಕ ರಚನೆಯಾಗಿದ್ದರಿಂದ ಬೆಂಕಿ ಬೇಗನೆ ಹೊತ್ತಿಕೊಂಡಿತು ಎನ್ನಲಾಗುತ್ತಿದೆ.
ಅರ್ಪೊರಾ ನದಿಯ ಹಿನ್ನೀರಿನಲ್ಲಿರುವ ಈ ಕ್ಲಬ್‌ನ ಪ್ರವೇಶ ಮತ್ತು ನಿರ್ಗಮನ ಹಾದಿಗಳು ತೀರಾ ಕಿರಿದಾಗಿದ್ದವು. ಪರಿಣಾಮವಾಗಿ, ಅಗ್ನಿಶಾಮಕ ವಾಹನಗಳು 400 ಮೀಟರ್ ದೂರದಲ್ಲಿ ನಿಲ್ಲುವಂತಾಗಿ, ಬೆಂಕಿ ನಂದಿಸುವ ಕಾರ್ಯ ವಿಳಂಬವಾಯಿತು.
ಘಟನೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ನೈಟ್‌ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ. ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
