ಕಲಬುರಗಿ: “ಸಿದ್ದರಾಮಯ್ಯ ಸಿಎಂ ಕುರ್ಚಿ ಯಾವಾಗ ಅಲ್ಲಾಡುತ್ತದೋ ಮತ್ತು ಯಾವಾಗ ಅವರಿಗೆ ಅಸ್ಥಿರತೆ ಕಾಡುತ್ತದೋ ಅವಾಗೆಲ್ಲಾ ಅವರು ಸಮಾವೇಶ ಮಾಡಿಕೊಂಡು ಬಂದಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅಂದ್ರೆ ಸಮಾವೇಶ, ಸಮಾವೇಶ ಅಂದ್ರೆ ಸಿದ್ದರಾಮಯ್ಯ ಆಗಿದೆ” ಎಂದರು. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದ ಅವರು, “ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಹಿಂದ ಸಮಾಜ ಮುಂದೆ ಇಟ್ಟುಕೊಂಡು ಹೈಕಮಾಂಡ್‌ಗೆ ಬೆದರಿಸುವ ಕುತಂತ್ರ ಮಾಡುತ್ತಿದ್ದಾರೆ. ಎರಡೂವರೆ ವರ್ಷದಲ್ಲಿ ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯವಾಗಿದೆ. ಅವರ ಸಾಧನೆ ನಿಜವಾಗಿದ್ದರೆ ಸುರ್ಜೆವಾಲ ಪದೆ ಪದೇ ಬಂದು ಶಾಸಕರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಇರುತ್ತಿರಲಿಲ್ಲ” ಎಂದರು.
“ಸಿದ್ದರಾಮಯ್ಯ ಅವರಿಗೆ ಸಿಎಂ ಗಾದಿ ಅನಿಶ್ಚಿತತೆ ಕಾಡುತ್ತಿದೆ. ಹಾಗಾಗಿಯೇ ಹೈ ಕಮಾಂಡ್ ಬೆದರಿಸಲು ಅವರು ಮೈಸೂರಿನಲ್ಲಿ ಸಮಾವೇಶದ ಮೂಲಕ ಯತ್ನಿಸುತ್ತಿದ್ದಾರೆ. ಸಿಎಂ ನಾನಾಗಬೇಕು. ನಾನಾಗಬೇಕು.. ಎನ್ನುವ ಪೈಪೋಟಿ ಮತ್ತು ಸಿಎಂ ಗಾದಿಗಾಗಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಎಲ್ಲವೂ ರೇಟ್ ಫಿಕ್ಸಿಂಗ್ ನಡೆಯುತ್ತಿದೆ” ಎಂದು ಆರೋಪಿಸಿದರು.
“ಐದು ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿದ್ದಲ್ಲ. ಹಾಗೆ ಹೇಳುವ ಮೂಲಕ ಸಿದ್ದರಾಮಯ್ಯ ಹೈಕಮಾಂಡ್‌ಗೆ ನೇರ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಈ ಹಿಂದೆಲ್ಲ ಸಿದ್ದರಾಮಯ್ಯ ಅವರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು. ಆದರೆ, ಮೊನ್ನೆ ದೆಹಲಿಗೆ ಹೋದ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಪಾಯಿಂಟಮೆಂಟ್ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ” ಎಂದರು.
“ಡಿ.ಕೆ. ಶಿವಕುಮಾರ್ ಪರ ಹಲವು ಶಾಸಕರು, ಸಿದ್ದರಾಮಯ್ಯ ಪರ ಹಲವರು ಬ್ಯಾಟಿಂಗ್ ಆರಂಭಿಸಿದ್ದಾರೆ. ಇನ್ನು ಕೆಲವರು ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಬೇಕು ಅಂತ ಪೈಪೋಟಿಗೆ ಬಿದ್ದಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಕಚ್ಚಾಟ, ಪೈಪೋಟಿ ನಡೆಯುತ್ತಿದೆ” ಎಂದು ಆರೋಪಿಸಿದರು.
ಖರ್ಗೆ ಅಂದರೆ ಸಿಎಂಗೆ ಕೋಪ: ದಲಿತ ಸಿಎಂ ಬಗ್ಗೆ ಪತ್ರಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, “ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳಿದ್ರೆ ಸಿದ್ದರಾಮಯ್ಯ ಅವರಿಗೆ ಕೋಪ ಬರುತ್ತದೆ. ಜಿ. ಪರಮೇಶ್ವರ್ ಅವರಿಗೆ ಅನ್ಯಾಯ ಮಾಡಿದ್ರು. ಜಿ. ಪರಮೇಶ್ವರ ಅವರಿಗೆ ಹೇಗೆ ಅನ್ಯಾಯ ಆಗಿದೆ ಅಂತ ಚರ್ಚೆ ಆಗಿದೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿದ್ರೆ ಸಿದ್ದರಾಮಯ್ಯ ಅವರಿಗೆ ಕೋಪ ಬರುತ್ತಿದೆ. ನಾನು ಈ ಹಿಂದೆ ಹೇಳಿದಾಗಲೂ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದರು. ಎರಡೂ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಬೆದರಿಸೋ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
ಸಿಎಂ ಕಪಟ ನಾಟಕ: “ಇದೀಗ ಸಿಎಂ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ನೀಡುವ ಮೂಲಕ ಕಪಟ ನಾಟಕ ಮಾಡುತ್ತಿದ್ದಾರೆ. 50 ಕೋಟಿ ಬಿಡುಗಡೆಯ ಬಗ್ಗೆ ಸಿಎಂ ಏನೋ ಮಾತನಾಡಿದ್ದಾರೆ. ಆದರೆ, ಯಾವಾಗ ಬಿಡುಗಡೆ ಆಗುತ್ತೆ ? ಯಾವಾಗ ಶಾಸಕರ ಕೈ ಸೇರುತ್ತೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ” ಎಂದು ವಿಜಯೇಂದ್ರ ಹೇಳಿದರು.