ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ದೀರ್ಘಾವಧಿಯ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿ ಅಮಿತ್ ಶಾ ಹೊಸ ದಾಖಲೆ ಬರೆದರು. ಈ ಮೂಲಕ ಬಿಜೆಪಿಯ ಭೀಷ್ಮ ಎಂದೇ ಕರೆಯಲ್ಪಡುವ ಎಲ್.ಕೆ.ಅಡ್ವಾಣಿ ಹಿಂದಿನ ದಾಖಲೆಯನ್ನು ಸರಿಗಟ್ಟಿದರು.
ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ಆಡಳಿತದಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. 370ನೇ ವಿಧಿ ರದ್ದತಿ, ನಕ್ಸಲೀಯರ ಅಟ್ಟಹಾಸಕ್ಕೆ ಕಠಿಣ ಕ್ರಮ ಹಾಗೂ ಉಗ್ರವಾದದ ವಿರುದ್ಧದ ಕಠಿಣ ನಿಲುವುಗಳಿಂದ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.
ಗೃಹ ಸಚಿವರಾಗಿ ಅಮಿತ್ ಶಾ 2,258 ದಿನಗಳನ್ನು ಪೂರೈಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ಈ ದಾಖಲೆಯನ್ನು ಲಾಲ್ ಕೃಷ್ಣ ಅಡ್ವಾಣಿ ಅಡ್ವಾಣಿ ಹೊಂದಿದ್ದರು. ಅಡ್ವಾಣಿಯವರ ಆಡಳಿತ ಅವಧಿ 2,256 ದಿನಗಳು (6 ವರ್ಷ 64 ದಿನ). ಇನ್ನು ಇದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ನಾಯಕ ಗೋವಿಂದ್ ವಲ್ಲಭ್ ಪಂತ್ ಗೃಹ ಸಚಿವರಾಗಿ 6 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.
ಗುಜರಾತ್ ಮೂಲದ ಅಮಿತ್ ಬಿಜೆಪಿಯ ಚುನಾವಣಾ ಚಾಣಾಕ್ಯ ಎಂದೇ ಖ್ಯಾತಿ ಪಡೆದಿದ್ದಾರೆ. 5 ಬಾರಿ ಶಾಸಕರಾಗಿದ್ದಾರೆ. ಸತತ 4 ಬಾರಿ ಸರ್ಖೇಜ್ ವಿಧಾನಸಭಾ ಕ್ಷೇತ್ರ ಮತ್ತು 2012ರಲ್ಲಿ ನರನ್‌ಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2014ರ ಜುಲೈನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, 2017ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. 2019 ಮತ್ತು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರಾದ ಅಮಿತ್ ಶಾ ಶ್ಲಾಘಿಸಿದರು.
2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ದೃಢ ನಿರ್ಧಾರವನ್ನು ಕೈಗೊಂಡಿದ್ದರು. ಎಡಪಂಥೀಯ ಉಗ್ರವಾದ ಮತ್ತು ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಹಿಂಸಾಚಾರ ದೇಶದಲ್ಲಿ ಗಣನೀಯ ಇಳಿಕೆ ಕಂಡಿದೆ.
ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಮೂಲಕ ನೆರೆಯ ರಾಷ್ಟ್ರಗಳಿಂದ ಬಂದಿರುವ ವಲಸಿಗರಿಗೆ ನಾಗರಿಕ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕೂಡ ಅಮಿತ್ ಶಾ ಅವಧಿಯಲ್ಲಿ ಚರ್ಚೆಯ ಕೇಂದ್ರವಾಗಿತ್ತು.
ಇತ್ತೀಚಿಗೆ ಜವಹಾರ್‌ಲಾಲ್ ನೆಹರು ನಂತರ ದೀರ್ಘಾವಧಿ ಕಾಲದ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಪಾತ್ರರಾಗಿದ್ದರು. ಈಗ ದೇಶದಲ್ಲೇ ಅತೀ ಹೆಚ್ಚು ದಿನಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಅಮಿತ್ ಶಾ ಪಾತ್ರರಾಗಿದ್ದಾರೆ.