ನಾನು ಜಾರಿ ಮಾಡಿದ್ದು, ಹೇಳುತ್ತ ಹೋದರೆ ಬಹಳ ದೊಡ್ಡ ಪಟ್ಟಿ ಇದೆ…
ಹುಬ್ಬಳ್ಳಿ: ರಾಜ್ಯ ಸರ್ಕಾರದ 60% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎನ್ನುವ ಸಿಎಂ ಸಿದ್ಧರಾಮಯ್ಯ ಅವರು ನಮ್ಮ ಆಡಳಿತದಲ್ಲಿ 40 % ಸರಕಾರ ಎಂದರಲ್ಲ ಆವಾಗ ಏನು ದಾಖಲೆ ಕೊಟ್ಟಿದ್ದರು? ಇದುವರೆಗೂ ದಾಖಲೆ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರ ಯಾವ ರೀತಿ ನಡೆದುಕೊಳ್ಳತ್ತಿದೆ ಅಂತಾ ಗೊತ್ತು. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಆಇತ್ತಿಲ್ಲ. ಜನಸಾಮಾನ್ಯರು, ಗುತ್ತಿಗೆದಾರರು, ಎಲ್ಲ ವರ್ಗದ ಜನರಿಗೆ ಭ್ರಷ್ಟಾಚಾರದ ಬಿಸಿ ಮುಟ್ಟಿದೆ. ಇನ್ನೂ ಏನೂ ಆಗಿಲ್ಲ ಎಂದು ಮುಖ್ಯಮಂತ್ರಿಗಳು ವರ್ತಿಸುತ್ತಿರುವುದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ ಎಂದು ಆರೋಪಿಸಿದರು.
ಬಿಜೆಪಿ ಗ್ಯಾರೆಂಟಿ ಕೊಟ್ಟಿದೆ : ಕಾಂಗ್ರೆಸ್‌ನವರು ಗ್ಯಾರಂಟಿ ಜಾರಿ ಮಾಡಿದ್ದೇವೆ ನೀವು ಏನು ಮಾಡಿದ್ದೀರಿ ಎಂಬ ಕಾಂಗ್ರೆಸ್ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿದ್ದೇವೆ. 15 ವರ್ಷಗಳಾಯಿತು. ಇದನ್ನು ಕಾಂಗ್ರೆಸ್ ನವರು ಮಾಡಿದ್ದರೆ? ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷೀ ಯೋಜನೆ ಜಾರಿ ಮಾಡಿದ್ದು ನಮ್ಮ ನಾಯಕರಾದ ಯಡಿಯೂರಪ್ಪನವರು. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನಾನು ಜಾರಿ ಮಾಡಿದ್ದು, ಹೇಳುತ್ತ ಹೋದರೆ ಬಹಳ ದೊಡ್ಡ ಪಟ್ಟಿ ಇದೆ. ಆಶಾ, ಅಂಗನವಾಡಿ ಕಾರ್ಯಕರ್ತರ ಹರಿವ ಸಾಕಷ್ಟು ಸೌಲಭ್ಯ ಮಾಡಿದ್ದೇವೆ. ಎಸ್ಸಿ ಎಸ್‌ಟಿ ಹೆಣ್ಣು ಮಕ್ಕಳಿಗೆ ಕಿತ್ತೂರ ಚನ್ನಮ್ಮ ವಸತಿ ಶಾಲೆ ಮಾಡಿದೆವು. ಇವರೇನು ಮಾಡಿದರು ? ಒಂದು ರಸ್ತೆ ಸರಿ ಇಲ್ಲ .ಗುಂಡಿ ಮುಚ್ಚಲೂ ಹಣ ,ಇಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ: ಅಮಿತಾ ಶಾ ಅಂಬೇಡ್ಕರ್ ಕುರಿತು ಹೇಳಿಕೆ ಕುರಿತು ಕಾಂಗ್ರೆಸ್ ಪ್ರತಿಭಟನೆ ವಿಚಾರ ಡಾ.ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಅನ್ನುವುದು ಇವತ್ತಿನ ಯುವ ಜನತೆಗೆ ಬಹಿರಂಗವಾಗಿದೆ. ಸಂಸತ್ತಿನಲ್ಲಿ ಎರಡು ದಿನ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಅನ್ನುವುದು ಸ್ಪಷ್ಟವಾಗಿದೆ. ತಾವು ಮಾಡಿರುವ ಅಪರಾಧವನ್ನು ಮುಚ್ಚಿ ಹಾಕಿಕೊಳ್ಳಲು ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ, ಮೊದಲು ಅಂಬೇಡ್ಕರ್‌ಗೆ ಅವರ ಹಿರಿಯರು ಮಾಡಿರುವ ಅಪಮಾನಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲಿ ಎಂದು ಹೇಳಿದರು.