Home News ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಹೋರಾಟಗಾರರ ವಿರುದ್ಧ ಸಾಲು ಸಾಲು FIR

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಹೋರಾಟಗಾರರ ವಿರುದ್ಧ ಸಾಲು ಸಾಲು FIR

ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ಹೋರಾಟದ ಸಂಬಂಧ ಸ್ವಾಮೀಜಿಗಳು ಸೇರಿದಂತೆ ಶಾಸಕರು ಹಾಗೂ ರೈತ ಹೋರಾಟಗಾರರ ಮೇಲೆ FIR ದಾಖಲಿಸಿರುವ ಕ್ರಮ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿಯನ್ನು ಹಂಚಿಕೊಂಡು ಪೋಸ್ಟ್‌ ಮಾಡಿ ಹೇಮಾವತಿ ಲಿಂಕ್ ಕೆನಾಲ್ ಹೋರಾಟದ ಸಂಬಂಧ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಮನ್ವಯತೆ ಸಾಧಿಸಿ ಜನರ ಬೇಡಿಕೆಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಬದಲು ಅವರ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಚಳವಳಿಯಲ್ಲಿ ಭಾಗವಹಿಸಿದ್ದ ತುಮಕೂರು ಜಿಲ್ಲೆಯ ವಿವಿಧ ಮಠಗಳ ಪರಮಪೂಜ್ಯ ಸ್ವಾಮೀಜಿಗಳು ಸೇರಿದಂತೆ ಶಾಸಕರು ಹಾಗೂ ರೈತ ಹೋರಾಟಗಾರರ ಮೇಲೆ FIR ದಾಖಲಿಸಿರುವ ಕ್ರಮ ಅತ್ಯಂತ ಖಂಡನೀಯ.

ಕೃಷಿಕ ಸಮಸ್ಯೆ ಹಾಗೂ ರೈತರ ಹಲವಾರು ಬೇಡಿಕೆಗಳ ಕುರಿತು ಹೋರಾಡಬೇಕಿದ್ದ ನಮ್ಮ ಜನರನ್ನು ನಮ್ಮೊಳಗೇ ಹೋರಾಟ ಮಾಡುವ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸುತ್ತಿರುವ ಕಾಂಗ್ರೆಸ್ ಸರ್ಕಾರ ಒಡೆದು ಅಳುವ ನೀತಿ ಅನುಸರಿಸುತ್ತಿದೆ, ರಾಜಕೀಯ ಪ್ರತಿಷ್ಠೆಗೆ ಈ ವಿವಾದ ಹುಟ್ಟು ಹಾಕುತ್ತಿದೆ ಎಂಬ ಭಾವನೆ ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ಸೃಷ್ಟಿಯಾಗಿದೆ, ಇದಕ್ಕೆ ನೇರ ಹೊಣೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ. ಈ ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಸಂಬಂಧಿಸಿದ ಜಿಲ್ಲೆಗಳ ಜನಪ್ರತಿನಿಧಿಗಳು, ಪ್ರಮುಖರು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲೆಗಳ ಜನರಲ್ಲಿ ಸೋದರತ್ವದ ಭಾವನೆ ಹಾಗೂ ಸಾಮರಸ್ಯ ಗಟ್ಟಿಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಈ ಕೂಡಲೇ ಮುಂದಾಗಲಿ.

ತುಮಕೂರು ಜಿಲ್ಲೆಯ ರೈತ ಸಮುದಾಯ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಆಕ್ರೋಶ ಜನಕಾಳಜಿ ಹಾಗೂ ರೈತ ಕಾಳಜಿಯೇ ಹೊರತು ಯಾರ ವಿರುದ್ಧವೂ ಅಲ್ಲ ಎಂಬ ಸ್ಪಷ್ಟತೆ ಸರ್ಕಾರಕ್ಕಿರಲಿ, ಸದ್ಯ ಅವಶ್ಯಕತೆ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸರ್ವ ಸಮ್ಮತ ಹಾಗೂ ನ್ಯಾಯೋಜಿತ ಪರಿಹಾರ ಕಂಡುಹಿಡಿಯಲಿ ಎಂದು ಒತ್ತಾಯಿಸುವೆ ಎಂದಿದ್ದಾರೆ.

Exit mobile version