Home ತಾಜಾ ಸುದ್ದಿ ಹಿಂದುಳಿದ ವರ್ಗಗಳಲ್ಲೇ ಮೀಸಲಾತಿ ಬಿರುಕು

ಹಿಂದುಳಿದ ವರ್ಗಗಳಲ್ಲೇ ಮೀಸಲಾತಿ ಬಿರುಕು

0

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ. ೫೦ರ ಪರಿಮಿತಿ ಮೀರಿ ವಿಸ್ತರಣೆ ಮಾಡಲಾಗಿದೆ ಎಂಬ ಅಸಮಾಧಾನಗಳ ನಡುವೆಯೇ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಂಚಿಕೆಯಲ್ಲಿ ೧ ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. ೨೪ರಿಂದ ಶೇ. ೪೩ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಈಚೆಗೆ ಅಧಿಸೂಚನೆ ಪ್ರಕಟಿಸಿದೆ. ಆದರೆ ಈ ವೇಳೆ ಹಿಂದುಳಿದ ವರ್ಗಗಳಲ್ಲೇ ಕೆಲವು ವರ್ಗಗಳಿಗೆ ತಾರತಮ್ಯ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರ ಜೂನ್ ೧೦ರಂದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (೨ನೇ ತಿದ್ದುಪಡಿ) ಅಧಿನಿಯಮಕ್ಕೆ ಅಧಿಸೂಚನೆ ಪ್ರಕಟಿಸಿದೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಾಮಗಾರಿಗಳಲ್ಲಿ ೧ ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತದ ಟೆಂಡರ್ ಹಂಚಿಕೆಯಲ್ಲಿ ಈಚೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ. ೨೪ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಈಗ ಪ್ರಕಟಿಸಿದ ಅಧಿಸೂಚನೆ ಪ್ರಕಾರ, ಹಾಲಿ ಶೇ. ೨೪ರಷ್ಟು ಮೀಸಲಾತಿ ಜತೆಗೆ ಹಿಂದುಳಿದ ವರ್ಗಗಳ ಪ್ರವರ್ಗ ೧ಕ್ಕೆ ಶೇ. ೪ರಷ್ಟು ಹಾಗೂ ೨ಎ ವರ್ಗಗಳಿಗೆ ಶೇ.೧೫ರಷ್ಟು ಮೀಸಲಾತಿ ನೀಡಬೇಕು. ಅಂದರೆ ಮೀಸಲಾತಿ ಪ್ರಮಾಣ ಈಗ ಶೇ. ೨೪ರಿಂದ ಶೇ.೪೩ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಹಾಲಿ ನಿಯಮಾವಳಿ ಪ್ರಕಾರ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ಆದಾಯ ಮಿತಿ ೮ ಲಕ್ಷ ರೂ.ಗಳನ್ನು ಮೀರುವಂತಿಲ್ಲ. ಆದರೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆದಾಯ ಮಿತಿಯನ್ನು ಸಡಿಲಿಸಿ ಈ ಮೀಸಲಾತಿ ನೀಡಿರುವುದು ಹಾಲಿ ಮೀಸಲಾತಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂಬ ಆರೋಪ ಗುತ್ತಿಗೆದಾರರಿಂದ ಕೇಳಿಬಂದಿದೆ. ಈ ಕುರಿತು ಕಾನೂನು ಹೋರಾಟಕ್ಕೆ ಈಗ ಹಿಂದುಳಿದ ವರ್ಗಗಳ ಗುತ್ತಿಗೆದಾರರೇ ಮುಂದಾಗಿದ್ದಾರೆ. ಏಕೆಂದರೆ ಹಿಂದುಳಿದ ವರ್ಗಗಳನ್ನು ಮೀಸಲಾತಿಗೆ ಪರಿಗಣಿಸುವಾಗ ಕೆಲವೇ ವರ್ಗಗಳನ್ನು ಪರಿಗಣಿಸಿ ಇನ್ನುಳಿದವುಗಳನ್ನು ಕೈಬಿಡಲಾಗಿದೆ ಎಂಬುದು ಗುತ್ತಿಗೆದಾರರ ಆರೋಪ.

ಯಾರಿಗೆ ನ್ಯಾಯ?
ಕೆಟಗರಿ-೧ ಒಳಪಟ್ಟ ಗೊಲ್ಲರು, ಉಪ್ಪಾರ, ಗಂಗಾಮತ, ಕಬ್ಬಲಿಗ, ಮೊಗವೀರ, ಸುಣಗಾರ ಸೇರಿದಂತೆ ೯೫ ಜಾತಿ ಹಾಗೂ ಅವುಗಳ ಉಪಜಾತಿಗಳು ಮತ್ತು ೨-ಎಗೆ ಒಳಪಟ್ಟ ಕುರುಬ, ಮಡಿವಾಳ, ಗಾಣಿಗ, ಈಡಿಗ ಸೇರಿದಂತೆ ೧೦೨ ಜಾತಿಗಳಿಗೆ

ಯಾರಿಗೆ ಅನ್ಯಾಯ?
೨-ಬಿಗೆ ಸೇರಿದ ಮುಸ್ಲಿಮರು, ೩-ಎಗೆ ಸೇರಿದ ಒಕ್ಕಲಿಗ, ರೆಡ್ಡಿ, ನಾಯ್ಡು, ೩-ಬಿಗೆ ಸೇರಿದ ವೀರಶೈವ ಲಿಂಗಾಯತ, ಮರಾಠ ಹಾಗೂ ಅವುಗಳ ಒಳಪಂಗಡಗಳನ್ನು ಒಳಗೊಂಡ ಜಾತಿಗಳಿಗೆ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ಇಲ್ಲ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ (ಇಡಬ್ಲೂಎಸ್)ಗೆ ಸೇರಿದ ಬ್ರಾಹ್ಮಣ, ಮೊದಲಿಯಾರ್, ನಾಯರ್, ಆರ್ಯವೈಶ್ಯ, ಜೈನರಿಗೆ ಸರ್ಕಾರಿ ಕಾಮಗಾರಿಗಳ ಟೆಂಡರ್‌ನಲ್ಲಿ ಮೀಸಲಾತಿ ಇಲ್ಲ.

Exit mobile version