ಮಂಗಳೂರು: ಭವಿಷ್ಯದ ಜನಾಂಗಕ್ಕಾಗಿ ರಾಜಕಾರಣ ಮಾಡಬೇಕು. ಪ್ರೀತಿ, ಸಮಾನತೆ, ವೈವಿಧ್ಯತೆಯ
ಬಾಳ್ವೆಯ ಚಿಂತನೆಯ ಭಾರತವನ್ನು ಕಟ್ಟಲು ಮುಂದಾಗಬೇಕು ಎಂದು ಮಾಜಿ ಜಿಲ್ಲಾಧಿಕಾರಿ,
ತಮಿಳ್ನಾಡಿನ ತಿರುವಳ್ಳುವರ್‌ನ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ
ಮಂಗಳವಾರ ನಗರದ ಪುರಭವನದಲ್ಲಿ ‘ಸಂತ ಮದರ್ ತೆರೇಸಾರ 27ನೇ ಸಂಸ್ಮರಣಾ ದಿನಾಚರಣೆ’
ಸಲುವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾ ಮನೋಭಾವ ಬೇಕು ನಿಜ, ಅದಕ್ಕಿಂತ ಸಹಕಾರ ಮನೋಭಾವ ಇರಬೇಕು. ಅದುವೇ ಮದರ್
ತೆರೇಸಾಗೆ ಸಲ್ಲಿಸುವ ಗೌರವ. ಸಮಾಜದಲ್ಲಿ ಸಾಮರಸ್ಯ, ಸಂತೋಷ, ನಂಬುಗೆಯ ಬದುಕು
ನಡೆಸುವವರೇ ಬಹುಸಂಖ್ಯಾತರು. ಅಂತಹ ಅಲೋಚನೆ ಇಲ್ಲದವರೇ ಅಲ್ಪಸಂಖ್ಯಾತರು.
ಸಂವಿಧಾನವನ್ನು ನಂಬಿಕೊಂಡು ಪ್ರೀತಿ, ವಿಶ್ವಾಸದಿಂದ ಸಮಾಜವನ್ನು ಕಟ್ಟಬೇಕು. ಸಂವಿಧಾನ
ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಅವರು ಆಶಿಸಿದರು.
ಸ್ವಾತಂತ್ರ್ಯ ಹೋರಾಟ ಶೇ.30ರಷ್ಟು ಮಾತ್ರ ಬ್ರಿಟಿಷರ ವಿರುದ್ಧ, ಉಳಿದ ಶೇ.70ರಷ್ಟು
ಸಮಾನತೆಗಾಗಿ ಹೋರಾಟ ನಡೆಸಲಾಗಿದೆ ಎಂದು ವ್ಯಾಖ್ಯಾನಿಸಿದ ಸಸಿಕಾಂತ್ ಸೆಂಥಿಲ್,
ಭಾರತದಲ್ಲಿ ಸಹಿಷ್ಣುತೆಯ ಬದಲು ವೈವಿಧ್ಯತೆಗೆ ಒತ್ತು ನೀಡಬೇಕು ಎಂದರು.
‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ..’ ಕುರಿತು ಮಾತನಾಡಿದ ವಿಧಾನ
ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೂ
ರಾಷ್ಟ್ರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಕಸಿಯುವ
ವ್ಯವಸ್ಥಿತ ಪಿತೂರಿ ಇದಾಗಿದ್ದು, ಸಂವಿಧಾನದ ಆಶಯವನ್ನು ನುಚ್ಚುನೂರು ಮಾಡುವ
ಹುನ್ನಾರವಾಗಿದೆ ಎಂದರು.
ಸಂವಿಧಾನವೇ ದೇಶದ ಪವಿತ್ರ ಗ್ರಂಥವಾಗಿದ್ದು, ಈಗ 22 ಭಾಷೆಗಳಿದ್ದು, ತುಳು, ಕೊಡವ
ಸೇರಿದಂತೆ ಇನ್ನೂ 26 ಭಾಷೆ ಸೇರ್ಪಡೆಗೆ ಪ್ರಯತ್ನ ನಡೆಯುತ್ತಿದೆ. ಧರ್ಮ ಪ್ರಭು ಬಳಿಕ
ರಾಜ ಪ್ರಭು ಬಂದಾಯ್ತು, ನಂತರ ಪ್ರಜಾಪ್ರಭುತ್ವ ಬಂದಿದೆ. ಇಸ್ಲಾಂ, ಕ್ರಿಶ್ಚಿಯನ್‌ರ
ಸೇವೆಯನ್ನೇ ಮತಾಂತರ ಎಂದು ಬಿಂಬಿಸಿ ಜನತೆಯ ನಂಬಿಕೆ, ಧೈರ್ಯ ಕುಸಿಯುವಂತೆ ಮಾಡುವ
ಸಂಘಟನೆಗಳನ್ನು ದೂರ ಇರಿಸಬೇಕು. ಧರ್ಮ, ಅಪನಂಬಿಕೆಗಳನ್ನು ಹೋಗಲಾಡಿಸಲು ಮುಂದಾಗಬೇಕು
ಎಂದರು.
ಸಾಮಾಜಿಕ ಚಿಂತಕಿ, ಸಾಹಿತಿ ಆಯಿಶಾ ಫರ್ಝಾನಾ ಪ್ರತಿಕ್ರಿಯಿಸಿದರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಅಧ್ಯಕ್ಷ ಮಂಜುಳಾ
ನಾಯಕ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ಗೌರವ ಸಲಹೆಗಾರರಾದ
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವರೀಸ್, ಫಾ.ಜೆ.ಬಿ.ಸಲ್ದಾನಾ,
ಡಾ.ಕೃಷ್ಣಪ್ಪ ಕೊಂಚಾಡಿ, ಮುನೀರ್ ಕಾಟಿಪಳ್ಳ, ಬಿ.ಎನ್.ದೇವಾಡಿಗ, ಕರಿಯ
ಮಂಗಳಜ್ಯೋತಿ, ಸುಮತಿ ಎಸ್.ಹೆಗ್ಡೆ ಮತ್ತಿತರರಿದ್ದರು.