Home ತಾಜಾ ಸುದ್ದಿ ಸೆ. ೨೮ಕ್ಕೂ ಪಿಎಸ್‌ಐ ಪರೀಕ್ಷೆ ಇಲ್ಲ

ಸೆ. ೨೮ಕ್ಕೂ ಪಿಎಸ್‌ಐ ಪರೀಕ್ಷೆ ಇಲ್ಲ

0

ಬೆಂಗಳೂರು: ಅಭ್ಯರ್ಥಿಗಳ ಮನವಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ಇದೇ ತಿಂಗಳ ೨೨ರಂದು ನಿಗದಿಯಾಗಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ಸೆ. ೨೮ಕ್ಕೆ ಮುಂದೂಡುವುದಾಗಿ ಹೇಳಿದ್ದ ಸರ್ಕಾರ ಈಗ ಮತ್ತೊಂದು ದಿನ ಪರೀಕ್ಷೆ ನಡೆಸುವುದಾಗಿ ಹೇಳಿದೆ.
ಇದೇ ೨೨ರಂದು ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಅದೇ ದಿನ ನಡೆಸಲು ಉದ್ದೇಶಿಸಿದ್ದ ಪಿಎಸ್‌ಐ ಪರೀಕ್ಷೆಯನ್ನು ಮುಂದೂಡಬೇಕೆಂದು ಅಭ್ಯರ್ಥಿಗಳು ರಾಜ್ಯಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಏಕಕಾಲಕ್ಕೆ ಎರಡು ಪರೀಕ್ಷೆಗಳು ನಡೆಯುವುದರಿಂದ ಗೊಂದಲ ಉಂಟಾಗುತ್ತದೆ. ಹೀಗಾಗಿ ನಿಗದಿಯಾಗಿರುವ ಪರೀಕ್ಷೆಯನ್ನು ಮುಂದೂಡಬೇಕೆಂಬುದು ಅಭ್ಯರ್ಥಿಗಳ ಮನವಿಯಾಗಿತ್ತು. ಇದಕ್ಕೆ ಮಣಿದ ಸರ್ಕಾರ ಸೆಪ್ಟೆಂಬರ್ ೨೮ರಂದು ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ, ಆ ದಿನವೂ ಯುಪಿಎಸ್‌ಸಿ ಪರೀಕ್ಷೆ ಇರುವುದರಿಂದ ಬೇರೆ ದಿನಾಂಕದಂದು ಪರೀಕ್ಷೆ ನಡೆಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ಒಟ್ಟು ೬ ಜಿಲ್ಲೆಗಳ ೧೬೪ ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಪರೀಕ್ಷೆಯನ್ನು ಇದೇ ೨೨ರಂದು(ಭಾನುವಾರ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ೪೦೨ ಅಭ್ಯರ್ಥಿಗಳಲ್ಲಿ ೧೦೨ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನೂ ಸಹ ತೆಗೆದುಕೊಂಡಿದ್ದರು. ಹೀಗಾಗಿ ಮುಂದೂಡಬೇಕೆಂಬುದು ಅವರ ಆಗ್ರಹವಾಗಿತ್ತು. ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಒಟ್ಟು ೬೬,೯೯೯ ಮಂದಿ ಪಿಎಸ್‌ಐ ಪರೀಕ್ಷೆ ತೆಗೆದುಕೊಂಡಿದ್ದಾರೆ.

Exit mobile version