Home ತಾಜಾ ಸುದ್ದಿ ಸುಹಾಸ್‌ ಶೆಟ್ಟಿ ಹತ್ಯೆ: ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡದ ಶಂಕೆ

ಸುಹಾಸ್‌ ಶೆಟ್ಟಿ ಹತ್ಯೆ: ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡದ ಶಂಕೆ

0

ಮಂಗಳೂರು: ಹಿಂದು ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಘಟನೆಯ ಹಿಂದೆ ನಿಷೇಧಿತ ಪಿಎಫ್‌ಐ(ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ) ಸಂಘಟನೆಯ ಕೈವಾಡದ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಈ ಹತ್ಯೆ ಘಟನೆಯ ತನಿಖೆಯನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ಏಜೆನ್ಸಿ)
ವಹಿಸಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಈ ಹಿಂದಿನ ಹತ್ಯೆ ಘಟನೆಗಳಲ್ಲಿ ಬಂಧಿತ ಆರೋಪಿಗಳ ಚಿತ್ರವನ್ನು ಬಹಿರಂಗವಾಗಿಯೇ ಪೊಲೀಸರು ಬಿಡುಗಡೆ ಮಾಡುತ್ತಿದ್ದರು. ಈ ಘಟನೆಯಲ್ಲಿ
ಬಂಧಿತ ಆರೋಪಿಗಳಿಗೆ ಮುಸುಕು ಹಾಕಿದ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಘಟನೆ ವೇಳೆ ಆರೋಪಿಗಳ ಪಲಾಯನಕ್ಕೆ ಸಹಕರಿಸುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಹೀಗಾಗಿ ಈ ಘಟನೆ ಹಿಂದೆ ಯಾರದ್ದೆಲ್ಲ ಕೈವಾಡ ಇದೆ ಎಂಬುದು ಕೇವಲ ಪೊಲೀಸ್‌ ತನಿಖೆಯಿಂದ ಬಯಲಾಗುವ ಸಾಧ್ಯತೆ ಕಾಣುತ್ತಿಲ್ಲ. ಮಾತ್ರವಲ್ಲ ಬಂಧಿತ ಆರೋಪಿಗಳಿಗೆ ನಿಷೇಧಿತ ಸಂಘಟನೆಯ ಕೈವಾಡ ಇರುವ ಶಂಕೆ ಮೇರೆಗೆ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಆಗ್ರಹಿಸುವುದಾಗಿ ಹೇಳಿದರು.

ಏಕಪಕ್ಷೀಯ ಸಭೆ ಸರಿಯಲ್ಲ: ಕಾನೂನು ಸುವ್ಯವಸ್ಥೆ ಪರಿಶೀಲನೆಗೆ ಮಂಗಳೂರಿಗೆ ಆಗಮಿಸಿದ ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಶಾಸಕರು, ಸಂಸದರು ಇದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸುವ ಮೂಲಕ ಸಚಿವರು ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಅಲ್ಲದೆ ಮುಸ್ಲಿಂ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವುದೂ ವರದಿಯಾಗಿದೆ. ಸಚಿವರುಗಳ ಈ ನಡವಳಿಕೆ ಸರಿಯಾದ ಕ್ರಮವಲ್ಲ
ಎಂದರು.

ಅಹಿತಕರ ಘಟನೆ ತಡೆಗೆ ಆ್ಯಂಟಿ ಕಮ್ಯುನಲ್‌ ಫೋರ್ಸ್‌ ತಂಡವನ್ನು ರಚಿಸುವುದಾಗಿ ಗೃಹ ಸಚಿವರು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಹೇಳಿದ್ದಾರೆ. ವಾಸ್ತವದಲ್ಲಿ ಅದನ್ನು ಆ್ಯಂಟಿ ಹಿಂದು ಕಮ್ಯುನಲ್‌ ಫೋರ್ಸ್‌ ಮಾಡಲು ಹೊರಟಿದ್ದಾರೆ. ಈ ಸರ್ಕಾರ ಹಿಂದುಗಳ ಮೇಲೆ ಸವಾರಿ ಮಾಡುತ್ತಿದ್ದು, ಹಿಂದುಗಳ ಜೀವನ ಮೇಲೆ ಚೆಲ್ಲಾಟ ನಡೆಸುತ್ತಿದ್ದಾರೆ ಎಂದು ಸತೀಶ್‌ ಕುಂಪಲ ಆರೋಪಿಸಿದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜಾ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್‌, ವಸಂತ ಪೂಜಾರಿ, ಸಂಜಯ ಪ್ರಭು, ನಂದನ್‌ ಮಲ್ಯ ಮತ್ತಿತರರಿದ್ದರು.

ಯು.ಟಿ. ಖಾದರ್‌ ನಿಜ ಬಣ್ಣ ಬಯಲು: ಸ್ಪೀಕರ್‌ ಆಗಿ ಮಹತ್ವದ ಸ್ಥಾನದಲ್ಲಿರುವ ಯು.ಟಿ.ಖಾದರ್ ಅವರು ಸುಹಾಸ್‌ ಹತ್ಯೆಯಲ್ಲಿ ಫಜಲ್‌ ಹತ್ಯೆಯ ಪ್ರತೀಕಾರ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸ್ಪೀಕರ್‌ ಸ್ಥಾನದಲ್ಲಿದ್ದವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಈಗ ಪೊಲೀಸ್‌ ಕಮಿಷನರ್‌ ಅವರೇ ಸುದ್ದಿಗೋಷ್ಠಿಯಲ್ಲಿ, ಸುಹಾಸ್‌ ಹತ್ಯೆಯಲ್ಲಿ ಫಾಜಲ್‌ನ ಸಹೋದರನೇ ಸುಪಾರಿ ನೀಡಿರುವ ಅಂಶವನ್ನು ಹೇಳಿದ್ದಾರೆ. ಹೀಗಿರುವಾಗ ಸ್ಪೀಕರ್‌ ಆದವರು ಜಿಹಾದಿ ಮನಸ್ಸಿನಲ್ಲಿ ಮಾತನಾಡಬಾರದು. ಈ ಮೂಲಕ ಯು.ಟಿ.ಖಾದರ್‌ ಅವರ ನಿಜ ಬಣ್ಣ ಅನಾವರಣಗೊಂಡಿದೆ ಎಂದು ಸತೀಶ್ ಕುಂಪಲ ಹೇಳಿದರು.

Exit mobile version