Home ಸಂಪಾದಕೀಯ ಶಾಲಾ ಬ್ಯಾಗ್ ರಹಿತದಿನ ಮಕ್ಕಳಿಗೆ ಸಂತಸದ ಕ್ಷಣ

ಶಾಲಾ ಬ್ಯಾಗ್ ರಹಿತದಿನ ಮಕ್ಕಳಿಗೆ ಸಂತಸದ ಕ್ಷಣ

0

ಬ್ಯಾಗ್ ಇಲ್ಲದೆ ಶಾಲೆಗೆ ಹೋಗುವುದೆಂದರೆ ಮಕ್ಕಳಿಗೆ ಸಂತಸದ ದಿನ. ಪ್ರತಿದಿನ ಬ್ಯಾಗ್ ಹೊರೆ ಹೊತ್ತು ಮನೆಗೆ ಬಂದೊಡನೆ ಹೋಂ ವರ್ಕ್ ಎಂಬ ಶಿಕ್ಷೆ ಅನುಭವಿಸುವುದು ನಮ್ಮ ಮಕ್ಕಳ ನಿತ್ಯ ಶಿಕ್ಷೆಯಾಗಿ ಹೋಗಿದೆ. ಚಿಕ್ಕಮಕ್ಕಳ ಬೆನ್ನ ಹಿಂದೆ ೨ ಕೆಜಿಗಿಂತ ಹೆಚ್ಚು ಪುಸ್ತಕದ ಹೊರೆ ಇರಬಾರದು.

ಈಗಿನ ಶಾಲಾ ಶಿಕ್ಷಣ ಎಂದರೆ ಪುಟ್ಟ ಮಕ್ಕಳ ಹೆಗಲಿಗೆ ಹೊರಲಾಗದ ಪುಸ್ತಕದ ಹೊರೆಯನ್ನು ಹೇರುವುದೇ ಆಗಿದೆ. ಇದರಿಂದ ಮಕ್ಕಳು ದೈಹಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಕಾರ್ಮಿಕರು ಕಾರ್ಖಾನೆಗೆ ಹೋಗುವ ಹಾಗೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಬ್ಯಾಗ್ ತುಂಬ ಪುಸ್ತಕಗಳನ್ನು ತುಂಬಿಕೊಂಡು ಮನೆಗೆ ಬರುತ್ತಿದ್ದಂತೆ ಹೋಂ ವರ್ಕ್ ಮಾಡುತ್ತ ಕೂಡುತ್ತಾರೆ. ಹಿಂದಿನಿಂದಲೂ ಮಕ್ಕಳ ತೂಕದ ಬ್ಯಾಗ್ ಬಗ್ಗೆ ಹಲವು ಜನ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ. ಖ್ಯಾತ ಲೇಖಕ ಆರ್.ಕೆ. ನಾರಾಯಣ್ ರಾಜ್ಯಸಭೆಯಲ್ಲಿ ಮಕ್ಕಳ ಬ್ಯಾಗ್ ತೂಕ ಕಡಿಮೆ ಮಾಡಲು ಹೇಳಿದ್ದರು. ೨೦೧೬ ರಲ್ಲೇ ಇದರ ಬಗ್ಗೆ ಕರ್ನಾಟಕದಲ್ಲಿ ಚಿಂತನೆ ನಡೆದಿತ್ತು. ವೈದ್ಯಕೀಯ ಅಧ್ಯಯನ ಪ್ರಕಾರ ೩೦-೪೦ ಕೆಜಿ ಇರುವ ಮಗು ೨ ಕೆಜಿ ತೂಕದ ಬ್ಯಾಗ್ ಹಾಕಿಕೊಂಡು ಹೋಗಬಹುದು. ಈಗ ಮಕ್ಕಳ ಬ್ಯಾಗ್ ತೂಕ ಸರಾಸರಿ ೫ ಕೆಜಿ ಇದೆ. ರಾಜ್ಯದಲ್ಲಿ ೫೬ ಸಾವಿರ ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಲ್ಲಿ ಈ ಸಮಸ್ಯೆ ಕಡಿಮೆ. ಆದರೂ ಶಾಲೆಗಳ ಆಡಳಿತವರ್ಗ ಬ್ಯಾಗ್ ತೂಕ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಶಾಲೆಗಳಲ್ಲಿ ಪಠ್ಯಪುಸ್ತಕಗಳನ್ನು ಅಲ್ಲೇ ಬಿಟ್ಟು ಹೋಗಲು ಮಕ್ಕಳಿಗೆ ತಿಳಿಸುತ್ತಾರೆ. ಹಳ್ಳಿಯ ಮಕ್ಕಳಿಗೆ ಪ್ರಕೃತಿಯ ಸೊಬಗನ್ನು ನೋಡಿ ಆನಂದಿಸುವ ಅವಕಾಶವಾದರೂ ಇದೆ. ನಗರದ ಮಕ್ಕಳು ` ಪುಸ್ತಕ ಹುಳು’ ಗಳಾಗಿ ಬೆಳೆಯುತ್ತಾರೆ. ಚಿತ್ರಕಲೆ, ಹಾಡು, ಸಂಗೀತ, ನಾಟಕ ಎಲ್ಲವೂ ಈಗಿನ ತಂದೆತಾಯಿಗಳಿಗೆ ಕಾಲಹರಣ. ತಮ್ಮ ಮಗು ಒಂದನೇ ತರಗತಿಯಿಂದ ಮೊದಲನೇ ರ‍್ಯಾಂಕ್‌ಗಿAತ ಕಡಿಮೆ ಪಡೆಯಬಾರದು. ಇದು ದೊಡ್ಡವರ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಮಕ್ಕಳು ತಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಬೌದ್ಧಿಕ ಬೆಳೆವಣಿಗೆ ಪಡೆಯುವುದಿಲ್ಲ.
ಇದರಿಂದ ತೂಕ ಕಡಿಮೆಯಾಗುತ್ತದೆ. ಶಾಲೆಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಷಯದಲ್ಲಿ ಟೆಸ್ಟ್ ನಡೆಯುತ್ತಲೇ ಇರುತ್ತದೆ. ಹೋಂ ವರ್ಕ್ ಇಲ್ಲದ ದಿನವೇ ಇಲ್ಲ. ಹೀಗಾಗಿ ಮಕ್ಕಳಿಗೆ ಶಾಲೆ ಜೈಲಾಗಿ ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಅದರಲ್ಲೂ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಪಠ್ಯಕ್ರಮದಲ್ಲೇ ನಮ್ಮ ಮಗು ಓದಬೇಕು ಎಂದು ಬಯಸುವ ತಂದೆತಾಯಿಗಳೇ ಹೆಚ್ಚು. ಇದಕ್ಕಾಗಿ ಅವರು ಲಕ್ಷಾಂತರ ರೂ. ಸಾಲ ಮಾಡಲು ಸಿದ್ಧ. ರಾಜ್ಯ ಪಠ್ಯಕ್ರಮದಲ್ಲಿ ಈ ರೀತಿ ಮಕ್ಕಳ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡ ಹೇರುವುದು ಕಡಿಮೆ. ಶಾಲೆಯಲ್ಲಿ ಎಷ್ಟು ಬೌದ್ಧಿಕ ಚಟುವಟಿಕೆಯಲ್ಲಿ ಮಗು ತೊಡಗಿರುತ್ತದೋ ಅಷ್ಟೆ ಸಮಯ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು. ಹಿಂದೆ ಗುರುಕುಲ ಪದ್ಧತಿಯಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಮಾನ ಅವಕಾಶಗಳಿತ್ತು. ಈಗ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಗಾಳಿ ಮತ್ತು ಬೆಳಕು ಇರುವುದಿಲ್ಲ. ಹೀಗಾಗಿ ಮಕ್ಕಳು ಚಿಕ್ಕವಯಸ್ಸಿನಲ್ಲೇ ದೃಷ್ಟಿದೋಷದಿಂದ ಬಳಲುತ್ತಾರೆ. ಇಂಥ ಪದ್ಧತಿಯನ್ನು ಬದಲಿಸಿ ತಿಂಗಳಿಗೊಮ್ಮೆ ಒಂದು ದಿನ ಬ್ಯಾಗ್ ರಹಿತ ಎಂದು ಘೋಷಿಸಿರುವುದು ಸೂಕ್ತವಾಗಿದೆ. ಒಂದನೇ ತರಗತಿ ಮಗು ಎಷ್ಟು ಕಲಿಯಬೇಕೋ ಅಷ್ಟನ್ನು ಕಲಿತರೆ ಸಾಕು. ತಮ್ಮ ಮಗು ತುಂಬ ಬುದ್ಧಿವಂತನಿದ್ದಾನೆ ಎಂದು ಮುಂದಿನ ತರಗತಿಗಳಲ್ಲಿ ಕಲಿಯಬೇಕಾಗಿರುವುದನ್ನು ಈಗಲೇ ಹೇಳಿಕೊಟ್ಟು ಬಿಡುವ ತವಕ ಹೊಂದಿದ ತಂದೆತಾಯಿಗಳು ಇದ್ದಾರೆ. ಈಗಿನ ತಂದೆತಾಯಿಗಳು ತಮ್ಮ ಮಕ್ಕಳು ಸಣಕಲು ಕಡ್ಡಿಯಾದರೂ ಚಿಂತೆ ಇಲ್ಲ ರ‍್ಯಾಂಕ್ ಬರಬೇಕು. ಇಂಥ ಪರಿಸರದಲ್ಲಿ ಈಗ ತಿಂಗಳಿಗೆ ಒಂದು ಬ್ಯಾಗ್ ರಹಿತ ಎಂದು ಘೋಷಿಸಿರುವುದು ಬದಲಾವಣೆಯನ್ನು ತರಬಹುದು. ನಮ್ಮ ಮಕ್ಕಳು ಸರ್ವಾಂಗೀಣ ಬದುಕನ್ನು ಕಾಣಬೇಕು ಎಂದರೆ ಪುಸ್ತಕದೊಂದಿಗೆ ಜನರನ್ನೂ ತಿಳಿದುಕೊಳ್ಳುವ ಅವಕಾಶವನ್ನು ಪಡೆಯಬೇಕು. ತಂದೆತಾಯಿ ನಂತರ ಗುರುವೇ ದೇವರು ಎಂದು ನಮ್ಮ ಪರಂಪರೆ ಹೇಳುತ್ತದೆ. ಮಕ್ಕಳು ಚಿಕ್ಕವಯಸ್ಸಿನಲ್ಲಿ ಶಿಕ್ಷಕರನ್ನು ಎಲ್ಲ ರೀತಿಯಲ್ಲೂ ಅನುಸರಿಸುತ್ತಾರೆ. ಹೀಗಾಗಿ ಶಿಕ್ಷಕರು ಉತ್ತಮ ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಿಯಾಗಬೇಕು. ತಿಂಗಳಿಗೊಮ್ಮೆ ಮಕ್ಕಳು ಬ್ಯಾಗ್ ಇಲ್ಲದೆ ಬರುವ ಮಕ್ಕಳಿಗೆ ಜೀವನ ಪ್ರೀತಿಯನ್ನು ಹೇಳಿಕೊಡುವುದು ಶಿಕ್ಷಕರ ಕೆಲಸವಾಗಬೇಕು. ಆಗ ಬ್ಯಾಗ್ ರಹಿತ ದಿನ ಮಕ್ಕಳಲ್ಲಿ ಸಂತಸ ತರುವುದರಲ್ಲಿ ಸಂದೇಹವಿಲ್ಲ. ಶಾಲೆ ಮಕ್ಕಳಿಗೆ ಬಯಲು ಬಂದೀಖಾನೆ ಆಗಬಾರದು.

Exit mobile version