ಶಿವಮೊಗ್ಗ: ಪಾಕಿಸ್ತಾನವು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ತಕ್ಷಣ ಭಾರತಕ್ಕೆ ಶರಣಾಗತಿಯಾಗಬೇಕು. ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲವಾದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಭಾರತವನ್ನು ತುಂಡಾಗಿಸುವ ಮೂಲಕ ಭಾರತದ ದೇಹವನ್ನು ಛಿದ್ರ ಛಿದ್ರ ಮಾಡಿದರೂ ಪಾಕಿಸ್ತಾನಕ್ಕೆ ಸಮಾಧಾನವಾಗಿಲ್ಲ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪಾಕ್ ಉಗ್ರರು ಬಿಲದಲ್ಲಿದ್ದರೂ ಹುಡುಕಿ ಹೊರತಂದು ನಾಶ ಮಾಡುವ ಪಣತೊಟ್ಟಿದೆ. ಪಾತಕಿಗಳನ್ನು ಈಗಾಗಲೇ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ. ಪಾಕಿಸ್ತಾನ ತಪ್ಪೊಪ್ಪಿಕೊಳ್ಳದಿದ್ದರೆ ಸರ್ವನಾಶವಾಗುವುದು ಖಚಿತ. ಯುದ್ಧ ನಡೆದರೆ ಭಾರತ ಪಾಕಿಸ್ತಾನವನ್ನು ಹೊಸಕಿ ಹಾಕಲಿದೆ. ಇಡೀ ವಿಶ್ವವೇ ಭಾರತಕ್ಕೆ ಬೆಂಬಲಕ್ಕೆ ನಿಂತಿದೆ ಎಂದರು.
ಅನೇಕ ವರ್ಷಗಳಿಂದ ಪಾಕಿಸ್ತಾನ ಉಗ್ರವಾದಿಗಳನ್ನು ಬೆಳೆಸುತ್ತಿದೆ ಎಂದು ಪ್ರಪಂಚವೇ ಹೇಳಿ ಕೊಂಡು ಬರುತ್ತಿತ್ತು. ಅದಕ್ಕೆ ಪೂರಕವಾಗಿ ಶುಕ್ರವಾರ ಪಾಕಿಸ್ತಾನದ ರಕ್ಷಣಾ ಸಚಿವರೇ ತಾವು 30 ವರ್ಷಗಳಿಂದ ಉಗ್ರಗಾಮಿಗಳನ್ನು ಬೆಳೆಸಿಕೊಂಡು ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ನಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಅವರೇ ಬೆಳೆಸಿದ ಉಗ್ರಗಾಮಿಗಳೇ ಮಗ್ಗುಲ ಮುಳ್ಳಾಗಿದ್ದಾರೆ ಎಂದರು.
ಸಿಂಧೂ ನದಿ ಬಗ್ಗೆ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ ಒಂದು ಹನಿ ನೀರು ಪಡೆದುಕೊಳ್ಳುವಲ್ಲಿ ಇನ್ನಿಲ್ಲದ ಕಷ್ಟಪಡಬೇಕಾಗಿದೆ. ಪಾಕಿಸ್ತಾನಿಗಳು ಇದೇ ರೀತಿ ಮುಂದುವರೆದರೆ ಜೀವಂತ ಶವವಾಗಿ ಸಾಯುತ್ತಾರೆ ಎಂದು ತಿಳಿಸಿದರು.
ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರದಿಂದ ಕನ್ನಡಿಗರನ್ನು ಅತ್ಯಂತ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಕ್ಕೆ ನಾನು ಇಲ್ಲಿಂದಲೇ ಅವರ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದೆ. ಆದರೆ, ಅಲ್ಲಿಂದ ವಾಪಸ್ ಬಂದ ನಂತರ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು ‘ನೀ ಯಾವನಯ್ಯಾ ಪ್ರಧಾನಿ ಮೋದಿ ರಾಜಿನಾಮೆ ಕೇಳ್ಳಿಕ್ಕೆ?’ ಎಂದು ಕಿಡಿಕಾರಿದರು.