Home News ವೈದ್ಯರ ನಿರ್ಲಕ್ಷ, ಹಸುಗೂಸು ಸಾವು

ವೈದ್ಯರ ನಿರ್ಲಕ್ಷ, ಹಸುಗೂಸು ಸಾವು

ಬೆಳಗಾವಿ(ಅಥಣಿ): ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಭರಮಣಕೊಡಿ ಮೂಲದ ಮಗುವಿಗೆ ಗುರುವಾರ ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನರ್ಸ್ಗಳಿಂದ ಪೋಲಿಯೋ, ಪೇಂಟಾ ೧, ಐಪಿವಿ ೧, ಪಿವಿಸಿ ೧, ರೋಟಾ ೧, ವೈರಸ್ ಡ್ರಾಪ್ ನೀಡಲಾಗಿತ್ತು. ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಥಣಿ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿತ್ತು. ನಂತರ ಮಗುವನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಮಗು ಉಸಿರು ಚೆಲ್ಲಿದೆ.
ಮಗು ಸಾವಿಗೆ ಡೋಸ್ ನೀಡಿದ ವೈದ್ಯರ ನಿರ್ಲಕ್ಷವೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಲಸಿಕೆ ನೀಡಿದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಸರ್ಕಾರಿ ವೈದ್ಯರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಥಣಿ ತಾಲೂಕ ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ, ಒಂದೂವರೆ ತಿಂಗಳ ಮಗುವಿಗೆ ಹೃದಯ ತೊಂದರೆ ಇತ್ತು. ಆದರೂ ಕೂಡಾ ಮಗುವಿಗೆ ವ್ಯಾಕ್ಸಿನ್ ನೀಡಬಹುದು, ವ್ಯಾಕ್ಸಿನ್ ನೀಡಿದಾಗ ಸ್ವಲ್ಪ ಮಟ್ಟಿಗೆ ಜ್ವರ ಬರುತ್ತವೆ. ಈಗಾಗಲೇ ನಾಲ್ಕೈದು ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗಿದೆ. ಏನೂ ತೊಂದರೆ ಇಲ್ಲ. ಮಗುವಿಗೆ ರಾತ್ರಿ ಜ್ವರ ಹೆಚ್ಚಾದಾಗ ಆಸ್ಪತ್ರೆಗೆ ತೋರಿಸದ ಪಾಲಕರು, ಬೆಳಿಗ್ಗೆ ಅಥಣಿ ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ಮುಂದಾಗಿದ್ದು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೇ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

Exit mobile version