Home News ವಿಜಯೋತ್ಸವಕ್ಕೆ ತಿರುಗಿದ ಬಿಜೆಪಿ ಜನಾಕ್ರೋಶ ಯಾತ್ರೆ

ವಿಜಯೋತ್ಸವಕ್ಕೆ ತಿರುಗಿದ ಬಿಜೆಪಿ ಜನಾಕ್ರೋಶ ಯಾತ್ರೆ

ಸಂ.ಕ ಸಮಾಚಾರ, ಕೋಲಾರ: ಬುಧವಾರ ನಗರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಯೋಜಿಸಿದ್ದ ಬಿಜೆಪಿಯ ಜನಾಕ್ರೋಶ ಯಾತ್ರೆಯ ಭಾರತವು ನಡೆಸಿದ ಯಶಸ್ವಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ವಿಜಯೋತ್ಸವ ಯಾತ್ರೆಯಾಗಿ ಪರಿವರ್ತಿತಗೊಂಡಿತು.
ನಗರದಲ್ಲಿ ಆಯೋಜಿಸಿದ್ದ ಜನಾಕ್ರೋಶ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಇವತ್ತಿನ ಕಾರ್ಯಕ್ರಮವನ್ನು ಭಾರತ ಮತ್ತು ಭಾರತೀಯ ಸೈನಿಕರ ವಿಜಯೋತ್ಸವದ ಯಾತ್ರೆಯಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದರು.
ಇದರಿಂದಾಗಿ ಸಮಾವೇಶದಲ್ಲಿ ಮಾತನಾಡಿದ ಯಾವುದೇ ಮುಖಂಡರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೊಲ್ಲೆತ್ತಲಿಲ್ಲ. ಬದಲಿಗೆ ಬುಧವಾರ ಬೆಳಗಿನ ಜಾವ ಭಾರತೀಯ ಸೈನ್ಯವು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಬಿಡಾರಗಳ ಮೇಲೆ ನಡೆಸಿದ ಯಶಸ್ವಿ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಪ್ರಶಂಶಿಸಿದರು.
ಪಹಲ್ಗಾಮ್ ನಲ್ಲಿ ಉಗ್ರರು ದುಷ್ಕೃತ್ಯ ನಡೆಸಿ ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿದ್ದಕ್ಕೆ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಕೇಂದ್ರ ಸರ್ಕಾರವು ಪಾಕಿಸ್ತಾನಕ್ಕೆ ಹಿಂದೆಂದೂ ಇಲ್ಲದ ತಿರುಗೇಟು ನೀಡಿದೆ. ಅದರ ಮೂಲಕ ಭಾರತದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ ಎಂದು ವಿಜಯೇಂದ್ರ ಬಣ್ಣಿಸಿದರು.
ಈ ಸಂದರ್ಭದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೈನಿಕರ ಕೈ ಬಲಪಡಿಸಬೇಕಾಗಿದೆ ಶತ್ರು ರಾಷ್ಟ್ರವನ್ನು ಮಣಿಸುವ ಸಲುವಾಗಿ ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಅವರು ಹೇಳಿದರು.

ಇವತ್ತಿನ ಜನಾಕ್ರೋಶ ಈಗ ಕೇವಲ ಪಾಕಿಸ್ತಾನ ಹಾಗೂ ಉಗ್ರವಾದದ ವಿರುದ್ಧ ಮಾತ್ರ. ಕಾಂಗ್ರೆಸ್ ಪಕ್ಷ,‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮರ್ ರನ್ನು ಟೀಕಿಸುವುದಲ್ಲ. ಪ್ರಸ್ತುತ ಸೈನ್ಯವು ಉಗ್ರರ ಮಟ್ಟ ಹಾಕುತ್ತಿರುವಾಗ ಸೈನಿಕರಿಗೆ ಶಕ್ತಿ ತುಂಬುವ ಕೆಲಸ‌‌ ಮಾಡೋಣವೆಂದರು.

ಉಗ್ರರನ್ನು ಮಟ್ಟ ಹಾಕಲು ಕೋಲಾರಮ್ಮನಿಗೆ ಪೂಜೆ,‌ ಪ್ರಾರ್ಥನೆ ಸಲ್ಲಿಸಿ ಸೈನಿಕರಿಗೆ ಇನ್ನೂ ಶಕ್ತಿ ಕೊಡುವಂತೆ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳನ್ನು ಬೆಂಬಲಿಸಬೇಕಿತ್ತು. ಅದಕ್ಕೆ ಬದಲು ಶಾಂತಿ ಪಾಠದ ಟ್ವಿಟ್ಟರ್ ಮಾಡಿರುವುದು ನಾಚಿಕೆಗೇಡು ಎಂದು ಅವರು ಟೀಕಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು, ಎಂಎಲ್‌ಸಿ ರವಿಕುಮಾರ್, ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ಎನ್.ಮುನಿಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಭಾರತೀಯ ಸೈನಿಕರ ಪರಾಕ್ರಮವನ್ನು ಕೊಂಡಾಡಿದರು.
ಸಮಾವೇಶದಲ್ಲಿ ಭಾರತೀಯ ಧ್ವಜಗಳನ್ನು ಹಿಡಿದು ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಪಾಕಿಸ್ತಾನದ ಪರವಾಗಿ ಕೆಲವು ಶಕ್ತಿಗಳು ಭಾರತದಲ್ಲಿ ಇದೆ. ಅಂಥವರಿಗೆ ಪಾಠ ‌ಕಲಿಸುವ ದಿನ ದೂರ ಇಲ್ಲ. ಇಲ್ಲಿರುವ ಕೆಲವು ಪಾಕಿಸ್ತಾನದ ‌ಮನಸ್ಥಿತಿಯವರು ಬದಲಾಗದಿದ್ದರೆ ಮೋದಿಯವರು ಅಂತಹವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

Exit mobile version