Home ಅಪರಾಧ ಲಾಂಗು, ಮಚ್ಚು ಹಿಡಿದು ದರೋಡೆಗಿಳಿದ ಯೋಧ: ಬೆಚ್ಚಿ ಬಿದ್ದ ಜನತೆ

ಲಾಂಗು, ಮಚ್ಚು ಹಿಡಿದು ದರೋಡೆಗಿಳಿದ ಯೋಧ: ಬೆಚ್ಚಿ ಬಿದ್ದ ಜನತೆ

0

ಬಾಗಲಕೋಟೆ: ಹಾಡುಹಗಲೇ ಮನೆಯೊಂದರ ಮೇಲೆ ದಾಳಿ ನಡೆಸಿ ಲಾಂಗು, ಮಚ್ಚು ಹಿಡಿದು ದರೋಡೆಗಿಳಿದ ಪ್ರಕರಣ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಶುಕ್ರವಾರ ನಡೆದಿದೆ.
ಬೆಳಿಗ್ಗೆ 11ಗಂಟೆ ಸುಮಾರಿಗೆ ರಬಕವಿಯ ವಿದ್ಯಾನಗರದ 5ನೇ ಕ್ರಾಸ್‌ನಲ್ಲಿರುವ ದಸ್ತು ಬರಹಗಾರ ಶಿವಾನಂದ ಕೋಲಿಯವರ ಮನೆಗೆ ನುಗ್ಗಿದ ಮುಸುಕುಧಾರಿ ಇಬ್ಬರು ವ್ಯಕ್ತಿಗಳು ಮನೆಯಲ್ಲಿದ್ದ ಮಹಿಳೆ ಹಾಗೂ ಮಗುವಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ಕೊರಳಲ್ಲಿದ್ದ ಸುಮಾರು 11ಗ್ರಾಂ ತಾಳಿ ಸರ ಹಾಗೂ ಮಗುವಿನ ಕೊರಳಲಿದ್ದ 2 ಗ್ರಾಂ ಚಿನ್ನದ ಸರವನ್ನು ಬೆದರಿಸಿ ಪಡೆದಿದ್ದಾರೆ.
ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅರ್ಜುನ ಗಾಡಿವಡ್ಡರ ಹಾಗೂ ಆತನ ಅಳಿಯ ಸುನೀಲ ಗಾಡಿವಡ್ಡರ ಕೈಯಲ್ಲಿ ಮಾರಕಾಸ್ತ್ರಗಳಿದ್ದ ಕಾರಣ ದಿಕ್ಕು ತೋಚದಂತಾದ ಗೃಹಿಣಿ ಭಯಗೊಂಡು ಕಿರುಚ ತೊಡಗಿದ್ದಾಳೆ. ರಸ್ತೆ ಮೇಲೆ ಸಂಚರಿಸುತ್ತಿದ್ದ ಜನ ಗಾಬರಿಗೊಂಡು ಹೀಗೇಕೆ ಮನೆಯೊಳಗೆ ಕಿರುಚುತ್ತಿದ್ದಾರೆಂದು ಆಗಮಿಸುತ್ತಿದ್ದಂತೆ ಕಳ್ಳರು ಒಳನುಗ್ಗಿದ್ದು ಖಾತರಿಯಾಗಿದೆ.
ಯೋಧನಿಂದ ಕೃತ್ಯ:
17ವರ್ಷ ಪೂರ್ಣ ಅವಧಿ ಮುಕ್ತಾಯಗೊಳಿಸಿ ಎರಡನೇ ಅವಧಿಗೆ 10ವರ್ಷ ಸೇವೆಯಲ್ಲಿ ಮುಂದುವರೆದಿದ್ದ ಅರ್ಜುನ ಗಾಡಿವಡ್ಡರ ರಜೆ ನಿಮಿತ್ತ ಕಳೆದ ದಿ. 5ರಂದು ಮನೆಗೆ ಬಂದಿದ್ದನೆಂದು ತಿಳಿದು ಬಂದಿದೆ. ಸದ್ಯ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಜುನ್ ಆತನ ಅಳಿಯನೊಂದಿಗೆ ಕೃತ್ಯ ವೆಸಗಿದ್ದು, ಸಾಲ ಮಾಡಿಕೊಂಡಿದ್ದರಿಂದ ಕಳ್ಳತನಕ್ಕೆ ಮುಂದಾಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಪೊಲೀಸನ ಕೈಚಳಕ:
ಇದೇ ಬೀದಿಯಲ್ಲಿ ರಬಕವಿಯ ಉಪಠಾಣೆಯಲ್ಲಿ ಕರ್ತವ್ಯ ನಡೆಸುತ್ತಿದ್ದ ಪೊಲೀಸನ ಮನೆಯಿದ್ದು, ಆ ಸಮಯದಲ್ಲಿ ಮನೆಯಿಂದ ಹೊರಗೆ ತೆರಳುವ ಸಂದರ್ಭ ಕೋಲಿಯವರ ಮನೆಯಿಂದ ಚೀರಾಟದ ಶಬ್ದ ಕೇಳಿ ಬಂದಿದೆ. ಬೈಕ್‌ನಲ್ಲಿದ್ದ ಪೊಲೀಸ್ ವಾಪಸ್ ಬಂದು ಮನೆ ಮುಂದೆ ನಿಂತು ಕೊಂಚ ಪರಿಶೀಲಿಸುತ್ತಿದ್ದಂತೆ ಒಳಗೆ ಯಾರೋ ಕಳ್ಳರು ನುಗ್ಗಿದ್ದು ಅರಿವಾಗಿದೆ.
ಕೂಡಲೇ ಮನೆಯ ಹೊರಗಿನ ಬಾಗಿಲಕೊಂಡಿ ಹಾಕಿ ಸುತ್ತಲಿನ ಜನರೂ ಅಷ್ಟೊತ್ತಿಗೆ ಸೇರಿದ್ದಾರೆ. ಒಳಗಿದ್ದ ಇಬ್ಬರು ಆರೋಪಿಗಳಿಗೆ ಮನೆಯ ಮುಂಭಾಗದಲ್ಲಿ ಜನ ಸೇರಿರುವದು ಗೊತ್ತಾಗಿದೆ. ಮನೆಯಲ್ಲಿದ್ದ ಗೃಹಿಣಿಗೆ ಆವಾಜ್ ಹಾಕಿ ಹೊರ ಹೋಗಲು ಬೇರೆ ಬಾಗಿಲು ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ. ಭಯಗೊಂಡ ಯುವತಿ ಹಿಂದಿನ ಪುಟ್ಟ ಬಾಗಿಲನ್ನು ತೋರಿಸಿದ್ದಾಳೆ. ಅಲ್ಲಿಂದ ಪರಾರಿಯಾಗಿ ಓಡಿ ಹೋಗುತ್ತಿದ್ದಂತೆ ಅಲ್ಲಿನ ಜನ ಬೆನ್ನಟ್ಟಿದ್ದಾರೆ.
ರಸ್ತೆ ಮೇಲೆ ಹಿಡಿಯಲು ಬಂದ ಜನರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಓಡಿ ಹೋಗಲು ಯತ್ನಿಸಿದ್ದಾರೆ. ಅಷ್ಟರೊಳಗೆ ಎಲ್ಲೆಂದರಲ್ಲಿ ಜನರು ಹೊರ ಬಂದು ಆರೋಪಿತರಿಗೆ ಕಲ್ಲು ತೋರಿಸಿ ಎಲ್ಲಿಯೂ ಹೋಗದಂತೆ ಬೆದರಿಸಿದ್ದಾರೆ. ನಂತರ ವಿದ್ಯಾನಗರದ 8ನೇ ಕ್ರಾಸ್‌ನಲ್ಲಿ ಇಬ್ಬರು ಆರೋಪಿಗಳಾದ ಅರ್ಜುನ ಗಾಡಿವಡ್ಡರ ಹಾಗೂ ಸುನೀಲ ಗಾಡಿವಡ್ಡರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಈ ಪ್ರಕರಣದ ಕುರಿತು ಮನೆಯೊಡತಿ ಜ್ಯೋತಿ ಶಿವಾನಂದ ಕೋಲಿ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಬ್ಬರು ಬಂಧಿತ ಆರೋಪಿತರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Exit mobile version