Home ತಾಜಾ ಸುದ್ದಿ ರಾಹುಲ್ ಗಾಂಧಿಯಂತೆ ಸಿದ್ದರಾಮಯ್ಯರಿಗೂ ತಪ್ಪು ಮಾಹಿತಿ

ರಾಹುಲ್ ಗಾಂಧಿಯಂತೆ ಸಿದ್ದರಾಮಯ್ಯರಿಗೂ ತಪ್ಪು ಮಾಹಿತಿ

0

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಶೂನ್ಯತಾ ಸ್ಥಿತಿ ಬದಲಾಯಿಸಿಕೊಳ್ಳಲು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇ ಪದೇ ಮಹಾದಾಯಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ರಾಹುಲ್ ಗಾಂಧಿಯಂತೆ, ಸಿದ್ದರಾಮಯ್ಯ ಅವರನ್ನೂ ಈ ವಿಚಾರದಲ್ಲಿ ಯಾರೋ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ೨೦೦ ಪ್ರಶ್ನೆಗಳ ಪೈಕಿ ೮೦ ಪ್ರಶ್ನೆಗಳು ತಪ್ಪಾಗಿದ್ದವು. ಈ ಬಗ್ಗೆ ನಾವು ಪ್ರಶ್ನಿಸಿದರೆ ಮೆಣಸಿನಕಾಯಿ ಇಟ್ಟಂಗೆ ಆಗುತ್ತೆ. ಇದನ್ನು ಮರೆ ಮಾಚಲು ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲ ಮಾಹಿತಿ ಇಲ್ಲದೇ ಮಹಾದಾಯಿ ವಿಚಾರವನ್ನು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ' ಎನ್ನುವ ಸಿದ್ದರಾಮಯ್ಯ, ಗೋವಾಕ್ಕೆ ಹೋಗಿ,ಕರ್ನಾಟಕ್ಕಕೆ ಹನಿ ನೀರನ್ನೂ ಕೊಡಬೇಡಿ’ ಎಂದು ಹೇಳಿದವರು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು. ೧೯೭೦ ರಿಂದ ಮಹದಾಯಿ ವಿಚಾರ ವೇಗ ಪಡೆದಿದೆ. ೧೯೮೦ ರಿಂದ ೨೦೨೫ರ ವರಗೆ ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ್ದೇ ಕಾಂಗ್ರೆಸ್. ಆದರೆ, ಇಷ್ಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಮಹಾದಾಯಿ ಯೋಜನೆಗೆ ನಿಮ್ಮ ಕೊಡುಗೆ ಏನು ಎಂದು ಜೋಶಿ ಪ್ರಶ್ನಿಸಿದರು. ಅಲ್ಲದೆ, ಕೇಂದ್ರದಿಂದ ಮಹದಾಯಿಗಾಗಿ ಡಿಪಿಆರ್ ಕೊಡಿಸಿದ್ದೇವೆ. ಪರಿಸರ ಅನುಮತಿ ಕೂಡ ಕೊಡಿಸಿದ್ದೇವೆ. ಸಮಸ್ಯೆ ಬಂದಿರುವುದು ವನ್ಯಜೀವಿ ಮಂಡಳಿಯದ್ದು. ಮೇಲಾಗಿ ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ತಿಳಿಸಿದರು. ಮಹಾದಾಯಿ ವಿಚಾರವನ್ನು ಟ್ರಿಬ್ಯುನಲ್‌ಗೆ ನೀಡಬೇಡಿ ಎಂದು ಗೋಗರೆದರೂ ಬಿಡಲಿಲ್ಲ. ಟ್ರಿಬ್ಯುನಲ್ ಸ್ಥಾಪನೆಯಾದ ಬಳಿಕ ಅದಕ್ಕೊಂದು ಕಚೇರಿಯನ್ನೂ ಕೊಡದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು.

ಪಾಕಿಸ್ತಾನ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದು ಕೇಂದ್ರಕ್ಕೆ ತಿಳಿದಿದೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ನೀತಿಯಿಂದ ಈಗಾಗಲೇ ಪಾಕಿಸ್ತಾನ ಒದ್ದಾಡುತ್ತಿದೆ. ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ಖಂಡಿತ ಆಗುತ್ತದೆ. ಕಾಲಮಿತಿ ಹಾಕಿ ಹೀಗೇ ಮಾಡಬೇಕು ಎಂದು ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ರಾಷ್ಟ್ರದ ೪ನೇ ದೊಡ್ಡ ಹಾಗೂ ಬಲಿಷ್ಟ ಸೇನಾ ಪಡೆ ಇದೆ. ಆದರೆ, ಜಮೀರ್ ಮೊದಲು ಶಾಂತಿ ರೀತಿಯಿಂದ ಇದ್ದರೆ ಸಾಕು. ಏನೇನೋ ಹೇಳಿಕೆ ನೀಡುವುದನ್ನು ಬಿಟ್ಟು ತೆಪ್ಪಗಿದ್ದರೆ ಎಲ್ಲವೂ ತಂತಾನೇ ಸರಿಯಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಜಾತ್ರೆ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ ಅವರನ್ನು ದೂರವಿಡಲು ಏನೇನೋ ಮಾತನಾಡುತ್ತಿದ್ದಾರೆ. ಅಲ್ಲದೆ, ಇವರ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಕೂಡಾ ಅಂಥವರನ್ನು ರಕ್ಷಣೆ ಮಾಡುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

Exit mobile version