ಸಂ.ಕ. ಸಮಾಚಾರ, ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ಎಲ್ಲಾ ಪಂಚಾಯತ್‌ಗಳಲ್ಲಿ ಜೂ.೨೩ ರಂದು ಬೆಳಗ್ಗೆ ೧೦ ಗಂಟೆಗೆ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈಗಾಗಲೇ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿದರೂ, ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಆದುದರಿಂದ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಲಿದ್ದೇವೆ ಎಂದರು.
ಜೂ.೨೩ ರಂದು ೨೨೦ ಗ್ರಾಮ ಪಂಚಾಯತ್‌ಗಳಲ್ಲಿ, ೩ ಪುರಸಭೆಗಳಲ್ಲಿ, ೧ ಪಟ್ಟಣಪಂಚಾಯತ್‌ಗಳಲ್ಲಿ, ೨ ನಗರ ಸಭೆಗಳಲ್ಲಿ, ೮ ವಿಧಾನಸಭ ಕ್ಷೇತ್ರಗಳಲ್ಲಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಒಟ್ಟು ೩೯೯ ಕಡೆಗಳಲ್ಲಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಏಕ ನಿವೇಶನಕ್ಕೆ ೯/೧೧ ನಮೂನೆ ಅಗತ್ಯವಾಗಿದ್ದು, ಅದರ ಸಮಸ್ಯೆ ತಲೆ ಎತ್ತಿದ್ದು, ಮನೆ ನಿರ್ಮಾಣದ ನಕ್ಷೆಯನ್ನು ಪಡೆಯಲು ಗೃಹ ಮಂಡಳಿಗೆ ಹೋಗಬೇಕಾದ ಸನ್ನಿವೇಶ ಎದುರಾಗಿದೆ, ಜನರು ನಕ್ಷೆಗಾಗಿ ಅಲೆದಾಡುವ ಸ್ಥತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಭ್ರಷ್ಟಚಾರವೇ ಮೂಲ ಕಾರಣವಾಗಿದ್ದು, ಜನರಿಂದ ಹಣ ದೋಚಲು ಈ ರೀತಿಯ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ದೂರಿದರು.
ಎಲ್ಲ ಕಡೆಗಳಲ್ಲಿ ಅಕ್ರಮ-ಸಕ್ರಮ ಸಮಿತಿಯು ಆಯಾ ಕ್ಷೇತ್ರದ ಶಾಸಕರುಗಳ ಅಧ್ಯಕ್ಷೆಯಲ್ಲಿ ರಚನೆಯಾಗಿದ್ದು, ಸಹಾಯಕ ಆಯುಕ್ತರಿಗೆ ಇದರ ಜವಾಬ್ದಾರಿಯನ್ನು ವಹಿಸಲಾಗಿದೆ. ರೈತರು ಅಕ್ರಮ-ಸಕ್ರಮ ಜಾಗಕ್ಕೆ ಅರ್ಜಿ ಸಲ್ಲಿಸಿದರೆ ಆ ಆರ್ಜಿ ಸಮಿತಿಯ ಮುಂದೆ ಬಂದು ಚರ್ಚೆಯಾಗಬೇಕು. ಆದರೆ ಇಲ್ಲಿಯಾವುದೇ ರೀತಿಯಲ್ಲಿಯೂ ಸಮಿತಿಯ ಎದುರಲ್ಲಿ ಬಾರದೆ ನೇರವಾಗಿ ಸಹಾಯಕ ಆಯುಕ್ತರು ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದು, ಇದು ನೇರವಾಗಿ ರೈತರ ವಿರೋಧಿ ಕ್ರಮವಾಗಿದ್ದು, ರಾಜ್ಯ ಸರ್ಕಾರ ಏಕಪಕ್ಷೀಯ ನಡೆಯನ್ನು ನಡೆಯುತ್ತಿದೆ. ಇದರಿಂದ ನೇರವಾಗಿ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ರೈತರಿಂದಾಗಿ ಅಕ್ರಮ-ಸಕ್ರಮ ಜಾಗಗಳು ಇನ್ನೂ ಉಳಿದಿವೆ ರೈತರುಗಳು ಈ ಭೂಮಿಯಲ್ಲಿ ಇಂದಿಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಈ ಭೂಮಿಯನ್ನು ಕೈ ಬಿಟ್ಟಿದ್ದರೆ ಇಷ್ಟರಲ್ಲಿ ಭೂ ಮಾಫಿಯಾಗಳ ಕೈ ಸೇರುತ್ತಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷ ಪೂರೈಸಿದರೂ ಇಲ್ಲಿಯ ತನಕ ಒಂದೇ ಒಂದು ಆಶ್ರಯ ಮನೆಗಳು ಬಿಡುಗಡೆಯಾಗಲಿಲ್ಲ. ಸೂರು ಇಲ್ಲದವರಿಗೆ ಸೂರನ್ನು ಕಲ್ಪಿಸುವ ಕೆಲಸ ಆಗಬೇಕು. ರಾಜ್ಯ ಸರ್ಕಾರ ಈ ಕೂಡಲೇ ಪ್ರತೀ ಗ್ರಾಮ ಪಂಚಾಯತ್‌ಗೆ ೧೦೦ ಮನೆಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ಕೊಟ್ಟು ಎಲ್ಲವನ್ನೂ ಪಡೆದುಕೊಳ್ಳುವ ನೀತಿಯನ್ನು ಅನುಸರಿಸುತ್ತಿದ್ದು, ವೃದ್ಧಪ್ಯ ಮತ್ತು ಸಂಧ್ಯ ಸುರಕ್ಷಾ ಯೋಜನೆಯ ವೇತನವನ್ನು ಆದಾಯ ತೆರಿಗೆ ಮಿತಿಯ ನೆಪ ಹೇಳಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಅನೇಕ ಜನರು ವಂಚಿತರಾಗುತ್ತಿದ್ದಾರೆ ಎಂದ ಅವರು ವಿದ್ಯುತ್ ಬಿಲ್ ಏರಿಕೆ, ಮಳೆ ಪರಿಹಾರ ವಿಳಂಬ ನೀತಿಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸಚರು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ದಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ್ ಪ್ರಭು, ಬಿಕೆಪಿ ಪ್ರಮುಖರಾದ ಪ್ರಭಾಕರ್ ಪ್ರಭು, ದ.ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪೂರ್ಣಿಮಾ, ದಕ ಜಿಲ್ಲಾ ಬಿಜೆಪಿ ವಕ್ತಾರ ರಾಜಗೋಪಾಲ್ ರೈ ಉಪಸ್ಥಿತರಿದ್ದರು.