Home ತಾಜಾ ಸುದ್ದಿ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವೇ ಇಲ್ಲ, ಈಗ ಮಾಡಿರುವುದೂ ವೈಜ್ಞಾನಿಕವಾಗಿಲ್ಲ: ಕೇಂದ್ರ ಸಚಿವ...

ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವೇ ಇಲ್ಲ, ಈಗ ಮಾಡಿರುವುದೂ ವೈಜ್ಞಾನಿಕವಾಗಿಲ್ಲ: ಕೇಂದ್ರ ಸಚಿವ ಜೋಶಿ

0

ಹುಬ್ಬಳ್ಳಿ : ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ. ಈಗ ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿಯೇ ಗೊಂದಲವಿದೆ. ಉಪಮುಖ್ಯಮಂತ್ರಿ ಒಂದು ರೀತಿ ಹೇಳಿಕೆ ನೀಡುತ್ತಾರೆ. ಅವರ ಸಚಿವರು ಮತ್ತೊಂದು ರೀತಿ ಹೇಳಿಕೆ ನೀಡುತ್ತಾರೆ. ಮೊದಲು ವರದಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಸರ್ವೇ ಮಾಡುವ ಅಧಿಕಾರವಿದೆ. ಆದರೆ, ಅದನ್ನು ಅಂತಿಮಗೊಳಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಕೇಂದ್ರ ಸರ್ಕಾರ ವೇ ಅದನ್ನು ಅಂತಿಮಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಸಮಾಜದ ಹಿತ ಚಿಂತನೆಗಾಗಿ ಜಾತಿ ಗಣತಿಯನ್ನು ಕಾಂಗ್ರೆಸ್ ಮಾಡಿಲ್ಲ; ಬದಲಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು , ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಭೀಮ ಹೆಜ್ಜೆ ಯಾತ್ರೆಗೆ ಚಾಲನೆ :

ನಗರದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯ ಬಿಜೆಪಿಯು ಹಮ್ಮಿಕೊಂಡಿರುವ ಭೀಮ ಹೆಜ್ಜೆ ಯಾತ್ರೆಗೆ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.

1925 ರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಭೀಂ ಹೆಜ್ಜೆ@100 ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಮಹಾತ್ಮಾ ಗಾಂಧೀಜಿ ಬೆಳಗಾವಿಗೆ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ 100 ವರ್ಷವಾಗಿದ್ದಕ್ಕೆ ಕಾಂಗ್ರೆಸ್ ನವರು ಸಮಾವೇಶ ಮಾಡಿದರು. ಆದರೆ, ಡಾ. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷವಾಗಿದೆ ಯಾಕೆ ಸಮಾವೇಶ ಮಾಡಲಿಲ್ಲ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸರ್ಕಾರದ ಗಮನ ಸೆಳೆದರೂ ಸಮಾವೇಶ ಮಾಡಿಲ್ಲ. ಗೌರವಿಸುವ ಕೆಲಸ ಮಾಡಿಲ್ಲ. ಡಾ.ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸ ಬಿಜೆಪಿ ಮಾಡುತ್ತಿದೆ. ಅಂಬೇಡ್ಕರ್ ಅವರಿಗರ ಕಾಂಗ್ರೆಸ್ ನವರು ಭಾರತ ರತ್ನವನ್ನೂ ಕೊಟ್ಟಿರಲಿಲ್ಲ. ಪದ್ಮವಿಭೂಷಣವನ್ನೂ ನೀಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭೀಮ ಯಾತ್ರೆಗೆ ಚಾಲನೆ ನೀಡಿದ ವೇಳೆ ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಘಟಕ ಉಪಾಧ್ಯಕ್ಷ ಮಹೇಂದ್ರ ಕೌತಾಳ ಹಾಗೂ ಇತರರಿದ್ದರು.

Exit mobile version