ಬೆಂಗಳೂರು: ಬೇಸಿಗೆ ಶುರುವಾಗುತ್ತಿರುವಂತೆಯೇ ತಾಪಮಾನ ಹೆಚ್ಚಳವಾಗುತ್ತಿದ್ದು ರಾಜ್ಯದ ಕರಾವಳಿಯಲ್ಲಿ ಈಗಾಗಲೇ ಬಿಸಿ ಅಲೆ ಶುರುವಾಗಿದ್ದು, ಒಳನಾಡಿನ ಭಾಗದಲ್ಲಿ ಬಿಸಿ ಗಾಳಿ ಬೀಸುವ ಆತಂಕ ಎದುರಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾತಾವರಣದಲ್ಲಿ ಏರುಪೇರಾಗಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಆಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನ ಹೆಚ್ಚಳವಾಗುತ್ತಿದೆ. ದಕ್ಷಿಣ ಒಳನಾಡಿನಲ್ಲೂ ಈ ಬಾರಿ ತಾಪಮಾನ ೩೯ರಿಂದ ೪೦ ಡಿಗ್ರಿವರೆಗೂ ತಲುಪುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ ೪೫ ಡಿಗ್ರಿ ಸೆಲ್ಸಿಯಸ್ವರೆಗೂ ತಲುಪುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಒಂದು ವಾರದೊಳಗೆ ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲೂ ಸಾಮಾನ್ಯ ಮಟ್ಟಕ್ಕಿಂತ ೨ರಿಂದ ೪ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಲಿದೆ. ಕಲಬುರಗಿಯಲ್ಲಿ ಈಗಾಗಲೇ ೩೯.೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯ ತಾಪಮಾನಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚು. ಅಲ್ಲದೆ ಮುಂಬರುವ ಮೇ ತಿಂಗಳಲ್ಲಿ ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೪೫ ಸೆಲ್ಸಿಯಸ್ವರೆಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಿಸಿಲಿನ ಜೊತೆ ಮಳೆಯ ಸೂಚನೆ
ರಾಜ್ಯದ ಕೆಲವು ಭಾಗದಲ್ಲಿ ಬಿಸಿಲು ಹೆಚ್ಚಾಗಿರುವ ಜೊತೆಗೆ ಮಳೆಯ ಸೂಚನೆ ಕೂಡ ಇದೆ. ಸೋಮವಾರದವರೆಗೆ ಒಣಹವೆಯೇ ಮುಂದುವರಿಯಲಿದ್ದು, ಮಾರ್ಚ್ ೧೧ ಮತ್ತು ೧೨ರಂದು ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ರೂಪುಗೊಳ್ಳುತ್ತಿರುವ ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯದ ಕರಾವಳಿ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಈ ವೇಳೆ ಮಳೆಯಾಗುವ ಸಾಧ್ಯತೆಯಿದೆ.