Home News ರಾಜ್ಯದಲ್ಲಿ ಬಾಣಂತಿಯರ ಮರಣ ಪ್ರಮಾಣ ಇಳಿಕೆ

ರಾಜ್ಯದಲ್ಲಿ ಬಾಣಂತಿಯರ ಮರಣ ಪ್ರಮಾಣ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಮರಣ ಪ್ರಮಾಣ ಶೇಕಡಾ 30 ರಷ್ಟು ಇಳಿಕೆ ಕಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ನಮ್ಮ ಸರ್ಕಾರ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳ ಕಾರಣದಿಂದ ರಾಜ್ಯದಲ್ಲಿ ಬಾಣಂತಿಯರ ಮರಣ ಪ್ರಮಾಣ ಶೇಕಡಾ 30 ರಷ್ಟು ಇಳಿಕೆ ಕಂಡಿದೆ. ಪ್ರಸವ ಪೂರ್ವ ಗರ್ಭಿಣಿಯರಿಗೆ ಕಡ್ಡಾಯ ತಪಾಸಣೆಗಳು, ಸಹಜ ಹೆರಿಗೆಗೆ ಆದ್ಯತೆ, ಅಧಿಕ ರಕ್ತಸ್ರಾವ ತಡೆಗಟ್ಟಲು ಕ್ರಮಗಳು, ಪ್ರಸೂತಿ ತಜ್ಞರಿಗೆ ಪುನರ್ ಮನನ ಸೇರಿದಂತೆ ಸೂಕ್ತ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಮನ್ವಯದ ಕೊರತೆ ನಿವಾರಿಸಲು ರಾಜ್ಯ ಮಟ್ಟದಿಂದ ತಾಲೂಕು ಮಟ್ಟದವರೆಗೆ ಒಂದು ಮಾರ್ಗಸೂಚಿಯನ್ನು ಅನುಸರಿಸಲಾಗುತ್ತಿದೆ. ಜೊತೆಗೆ ತಾಲೂಕು ಆಸ್ಪತ್ರೆಗಳಲ್ಲಿ ಇಬ್ಬರು ಪ್ರಸೂತಿ ತಜ್ಞರು, ಇಬ್ಬರು ಅರವಳಿಕೆ ತಜ್ಞರು ಮತ್ತು ಓರ್ವ ಮಕ್ಕಳ ತಜ್ಞರು ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ.

ನುಡಿದಂತೆ ನಡೆಯುವ ನಮ್ಮ ಸರ್ಕಾರ ಬಾಣಂತಿಯರ ಮರಣ ಪ್ರಮಾಣ ತಗ್ಗಿಸಲು ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿ ಜೀವವು ಅಮೂಲ್ಯವಾಗಿದ್ದು, ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದಿದ್ದಾರೆ.

Exit mobile version