ಹುಬ್ಬಳ್ಳಿ: ದೇಶಕ್ಕೆ ಕಂಟಕವಾಗಿರುವ ಉಗ್ರರನ್ನು ನಾಶ ಮಾಡಲು ಯುದ್ಧ ಅನಿವಾರ್ಯ. ಯುದ್ಧ ಹಿಂಸೆ ಆದರೂ ದೇಶ ರಕ್ಷಣೆ, ದೇಶದ ಸುರಕ್ಷೆಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಆಗುವ ಹಿಂಸೆ ಹಿಂಸೆಯಲ್ಲ, ಅದು ಅಹಿಂಸೆಯೇ ಆಗಿದೆ ಎಂದು ಎಂದು ಜೈನ ಸಂತ ಮುನಿಶ್ರೀ ಪ್ರಮಾಣಸಾಗರರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ರಕ್ಷಣೆ, ನಾಗರಿಕರ ರಕ್ಷಣೆ ಪ್ರತಿ ದೇಶದ ನೀತಿ ಆಗಿದೆ. ಭಾರತವು ಯಾವಾಗಲೂ ಸಮಗ್ರ ವಿಶ್ವದ ಸುರಕ್ಷೆಯನ್ನು, ವಿಶ್ವ ಶಾಂತಿಯನ್ನು ಬಯಸುವ ದೇಶವಾಗಿದೆ. ಅದರ ಜೊತೆಯಲ್ಲಿ ತನ್ನ ಸುರಕ್ಷೆಗೆ ಸದಾ ಸನ್ನದ್ಧವಾಗಿರುತ್ತದೆ. ನಮ್ಮ ಸೇನೆಯು ದೇಶದ ಗಡಿಗಳನ್ನು, ನಾಗರಿಕರನ್ನು ಸುರಕ್ಷಿತಗೊಳಿಸುವಲ್ಲಿ ಮಗ್ನವಾಗಿರುವುದು ಒಂದು ರೀತಿಯ ತಪಸ್ಸಾಗಿದೆ. ದೇಶಕ್ಕೆ ಎದುರಾಗಿರುವ ಕಂಟಕವನ್ನು ವೀರೋಚಿತವಾಗಿ, ಸಮರ್ಥವಾಗಿ ಎದುರಿಸುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡಬೇಕು, ಅವರ ಮನೋಬಲ ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದ್ದಾರೆ.
ದೇಶದ ಶತ್ರುಗಳು ಹೇಡಿಗಳಂತೆ ಉಗ್ರ ಕೃತ್ಯಗಳನ್ನು ಮಾಡಿದಾಗ ಅವರಿಗೆ ಪಾಠ ಕಲಿಸಲೇಬೇಕು. ಹಿಂಸೆ ಕೊಡುವುದು ಮತ್ತು ಹಿಂಸೆ ಅನುಭವಿಸುವುದರ ಮಧ್ಯೆ ಬಹು ಅಂತರವಿದೆ. ದೇಶ ರಕ್ಷಣೆಗಾಗಿ ಮಾಡುವ ಹಿಂಸೆ ಹಿಂಸೆ ಅಲ್ಲ, ಅದು ಧರ್ಮವಾಗಿದೆ. ಜೈನ ಧರ್ಮ, ಜೈನ ಸಮಾಜ ಸದಾ ಜಗತ್ತಿನ ಶಾಂತಿಯನ್ನು ಬಯಸುತ್ತದೆ. ಅದಕ್ಕಾಗಿ ನಿತ್ಯ ಪ್ರಾರ್ಥನೆ ಮಾಡುತ್ತದೆ. ಉಗ್ರ ಕೃತ್ಯಗಳನ್ನು ಮಾಡುವವರಿಗೆ ಸದ್ಬುದ್ಧಿ ಪ್ರಾಪ್ತಿಯಾಗಲಿ, ಜಗತ್ತಿನ ಪ್ರತಿಜೀವವೂ ನೆಮ್ಮದಿಯಿಂದ ಬದುಕುವಂತಾಗಲಿ. ಆದರೆ, ದೇಶ ರಕ್ಷಣೆಯ ವಿಷಯದಲ್ಲಿ ಉಗ್ರರನ್ನು, ಶತ್ರುಗಳನ್ನು ಸದೆ ಬಡಿಯುವುದನ್ನು ಜೈನ ಸಮುದಾಯ ಸದಾ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.