Home ತಾಜಾ ಸುದ್ದಿ ಮಹಾರಾಷ್ಟ್ರ ನವನಿರ್ಮಾಣ ಸೇನೆ  ಹೋರಾಟಕ್ಕೆ ಕರವೇ ಅಧ್ಯಕ್ಷರ  ಬೆಂಬಲ

ಮಹಾರಾಷ್ಟ್ರ ನವನಿರ್ಮಾಣ ಸೇನೆ  ಹೋರಾಟಕ್ಕೆ ಕರವೇ ಅಧ್ಯಕ್ಷರ  ಬೆಂಬಲ

0

ಬೆಂಗಳೂರು: ಮಹಾರಾಷ್ಟ್ರ ನವನಿರ್ಮಾಣ ಸೇನೆ ನಡೆಸುತ್ತಿರುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಹಾರಾಷ್ಟ್ರದ ಬ್ಯಾಂಕುಗಳಲ್ಲಿ  ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಮರಾಠಿ ಬಾರದ ಉತ್ತರ ಭಾರತೀಯರಿಂದ ಆಗುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಅಲ್ಲಿನ ಮಹಾರಾಷ್ಟ್ರ ನವನಿರ್ಮಾಣ ಸೇನೆ ( M.N.S) ನಡೆಸುತ್ತಿರುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ.

ಭಾರತ ಒಕ್ಕೂಟದ ಪ್ರತಿಯೊಂದು ಭಾಷೆಗಳಿಗೂ ಆಯಾ ರಾಜ್ಯದಲ್ಲಿ ಮೊದಲ ಸ್ಥಾನ ಸಿಗಬೇಕು ಎನ್ನುವ ವಿಚಾರವನ್ನು ಕರವೇ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ‌.

ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಿ ಭಾಷೆಯಲ್ಲಿ ಅಂಗಡಿಗಳು, ಬ್ಯಾಂಕಿನಲ್ಲಿ ಮಾತನಾಡದ ಸಿಬ್ಬಂದಿಗಳ ವಿರುದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ದನಿಯೆತ್ತುತ್ತಿರುವುದನ್ನು ಇತ್ತೀಚಿನ ಪತ್ರಿಕಾ ವರದಿಯಲ್ಲಿ ಗಮನಿಸಿದ್ದೇನೆ.

ಬ್ಯಾಂಕು, ಅಂಗಡಿಗಳಲ್ಲಿ ರಾಜ್ಯದ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಗಳು ಹೆಚ್ಚಾಗಲು ಭಾರತ ಸರಕಾರದ ನಿಯಮಗಳೇ ಮೂಲ ಕಾರಣ, ಬ್ಯಾಂಕಿನ ಸಿಬ್ಬಂದಿ ನೇಮಕಾತಿಯ ಪರೀಕ್ಷೆಯಲ್ಲಿ ಆಯಾ ರಾಜ್ಯದ ಯುವಕರಿಗೆ ಮಾತ್ರ ಸಿಗಬೇಕಾಗಿದ್ದ ಅವಕಾಶವನ್ನು ಉತ್ತರ ಭಾರತದ ಯುವಕರಿಗೆ ಸಹಾಯವಾಗಲೆಂದು ಬದಲಿಸಿದ್ದು, ಗ್ರಾಹಕ ಸೇವೆಯ ಕಾನೂನಿನಲ್ಲಿ ಹಿಂದಿಯೇತರ ಗ್ರಾಹಕರ ಹಕ್ಕುಗಳಿಗೆ ಯಾವುದೇ ಬೆಲೆಕೊಡದಿರುವುದು ಕಾರಣವಾಗಿದೆ‌.

ತಮ್ಮ ತಮ್ಮ ರಾಜ್ಯದಲ್ಲಿ ತಮ್ಮ ಭಾಷೆಯನ್ನು ಉಳಿಸಿ ಬೆಳೆಸಲು ಹೋರಾಟ ನಡೆಸುತ್ತಿರುವ ಭಾಷಾ ಸಂಘಟನೆಗಳ ಹೋರಾಟಕ್ಕೆ ಕರವೇ ಬೆಂಬಲಿಸುತ್ತದೆ‌. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಬ್ಯಾಂಕು, ಅಂಗಡಿಗಳಲ್ಲಿ ಮರಾಠಿ ಭಾಷೆಯಲ್ಲಿ ವ್ಯವಹಾರ ನಡೆಸಬೇಕೆಂದು ಒತ್ತಾಯಿಸುತ್ತಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆಗೆ ಈ ಹೋರಾಟದಲ್ಲಿ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

ಕರ್ನಾಟಕದ ಬ್ಯಾಂಕು, ಅಂಗಡಿಯಲ್ಲಿ ಕನ್ನಡವನ್ನು ಬಳಸಬೇಕೆಂದು ಒತ್ತಾಯಿಸುವ ಹೋರಾಟವನ್ನು ಕರವೇ ಮುಂದುವರೆಸಿಕೊಂಡು ಹೋಗುತ್ತದೆ. ಕೇಂದ್ರ ಸರ್ಕಾರ ಕನ್ನಡೇತರ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಯಿಸಿಕೊಂಡು ಅವರವರ ರಾಜ್ಯಗಳಿಗೆ ವಾಪಸ್ ಕಳುಹಿಸಬೇಕು. ಈ ನಿಟ್ಟಿನಲ್ಲಿ ಬಾಧಿತ ರಾಜ್ಯಗಳ ಸಂಘಟನೆಗಳೊಂದಿಗೆ ಕೈ ಜೋಡಿಸುವ ಕಾರ್ಯವನ್ನು ಮಾಡುತ್ತೇವೆ ಎಂದಿದ್ದಾರೆ.

Exit mobile version