Home ತಾಜಾ ಸುದ್ದಿ ಮರು ಪರೀಕ್ಷೆಗೆ ಆದೇಶಿಸುವಂತೆ ಸಿಎಂಗೆ ಪ್ರತಿಪಕ್ಷ ನಾಯಕನ ಪತ್ರ

ಮರು ಪರೀಕ್ಷೆಗೆ ಆದೇಶಿಸುವಂತೆ ಸಿಎಂಗೆ ಪ್ರತಿಪಕ್ಷ ನಾಯಕನ ಪತ್ರ

0

ಬೆಂಗಳೂರು: ಕೆಎಎಸ್‌ ಮರು ಪರೀಕ್ಷೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರಿಗೆ ಪ್ರತಿಪಕ್ಷ ನಾಯಕ ಆರ್‌ ಅಶೋಕ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡು ಪೋಸ್ಟ್‌ ಮಾಡಿದ್ದು ವಿಧಾನಸಭೆಯ ಅಧಿವೇಶನದಲ್ಲಿ ಆಶ್ವಾಸನೆ ಕೊಟ್ಟಂತೆ ದೋಷಪೂರಿತ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ 70,000ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರದ ಸಾರಾಂಶ: ಕರ್ನಾಟಕ ಲೋಕಸೇವಾ ಆಯೋಗವು 2023-24 ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ :ಪಿಎಸಸಿ 509/3(1)/2023-24, .26-02-2024 ರಂದು ಹೊರಡಿಸಲಾಗಿತ್ತು. ದಿನಾಂಕ 27-08-2024 ರಂದು ಪೂರ್ವಭಾವಿ ಪರೀಕ್ಷೆ ನಡೆಸಿದ KPSC 53 ಗಂಭೀರ ಭಾಷಾಂತರ ಲೋಪವೆಸಗಿತ್ತು. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಪ್ರಶ್ನೆ ಅರ್ಥ ಮಾಡಿಕೊಳ್ಳುವಲ್ಲಿ ತುಂಬಾ ಕಷ್ಟವಾಗಿತ್ತು. ದಿನಾಂಕ:02-09-2024 ರಂದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಭಾಷಾಂತರ ಲೋಪದಿಂದ ಅನ್ಯಾಯವಾಗಿದೆ ಎಂದು ಸ್ವತಂತ್ರ ಉದ್ಯಾನವನದಲ್ಲಿ ವಿಧಾರ್ಥಿ ಸಂಘಟನೆಗಳು ಪ್ರತಿಭಟನೆ ಮಾಡಿದ್ದರಿಂದ ಮುಖ್ಯಮಂತ್ರಿಗಳಾದ ತಾವು ತಮ್ಮ ಟ್ವಿಟ್ಟರ್ ಖಾತೆಯಿಂದ ಮರುಪರೀಕ್ಷೆಗೆ ಆದೇಶ ಹೊರಡಿಸಿದಿರಿ. KPSC ಮತ್ತೆ ಪೂರ್ವಭಾವಿ ಮರು ಪರೀಕ್ಷೆ ದಿನಾಂಕ :29-12-2024 ರಂದು ನಡೆಸಿತ್ತು. ಈ ಪರೀಕ್ಷೆಯಲ್ಲಿಯೂ ಮತ್ತದೇ ಭಾಷಾಂತರ ಲೋಪವೆಸಗಿದ KPSC ಸರಿಸುಮಾರು 79ಕ್ಕೂ ಹೆಚ್ಚು ಭಾಷಾಂತರ ಲೋಪವಾಗಿ ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುತ್ತದೆ. ರಾಜ್ಯದ ಹೆಸರಾಂತ ಸಾಹಿತಿಗಳು, ಸ್ವಾಮೀಜಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಮಗೆ ಗಂಭೀರ ಭಾಷಾಂತರ ಲೋಪದ ಬಗ್ಗೆ ಪತ್ರ ಬರೆದು ತಮ್ಮ ಗಮನಸೆಳೆದಿರುತ್ತಾರೆ. ವಿದ್ಯಾರ್ಥಿಗಳು ಆಗಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಸ್ವತಂತ್ರ ಉದ್ಯಾನವನದಲ್ಲಿ ಹೋರಾಟ ಮಾಡಿಕೊಂಡು ಬರುತಿದ್ದಾರೆ. ಅಹೋರಾತ್ರಿ ಧರಣಿ, ರಕ್ತಪತ್ರ ಚಳುವಳಿ, ಧಾರವಾಡದಲ್ಲಿ 10,000 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಧಾರವಾಡ ದಿಂದ ಬೆಂಗಳೂರಿ ನವರೆಗೆ ಪಾದಯಾತ್ರೆ ಮಾಡಿರುತ್ತಾರೆ. ಇದು ತಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಭಾವಿಸುತ್ತೇನೆ. ಇದರ ಮಧ್ಯ ಕಳೆದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನು ಭಾಷಾಂತರ ಲೋಪದ ಬಗ್ಗೆ ತಮ್ಮ ಗಮನಸೆಳೆದು ಸುಧೀರ್ಘವಾಗಿ ಸದನದಲ್ಲಿ ಮಾತನಾಡಿದ್ದು, ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿ ಆಗಿರುವ ಭಾಷಾಂತರ ಲೋಪ-ದೋಷಗಳ ಬಗ್ಗೆ ತಮ್ಮ ಗಮನಸೆಳೆದಿರುತ್ತೇನೆ. ಇದಕ್ಕೆ ಉತ್ತರವಾಗಿ ತಾವುಗಳು. “ಯಾವುದೇ ಕಾರಣಕ್ಕೂ ನಾನು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸುತ್ತೇನೆ.” ಎಂದುಹೇಳಿರುತ್ತೀರಿ. ಅದರಂತೆ, ನ್ಯಾಯಾಲದ ತೀರ್ಪು ಬಂದು ಮಾನ್ಯ ಉಚ್ಚನ್ಯಾಯಾಲಯದಲ್ಲಿ ಗಂಭೀರ ಭಾಷಾಂತರ ಲೋಪವಾಗಿರುವದನ್ನು ಅರಿತು ಉಚ್ಚನ್ಯಾಯಾಲಯದ ಮೆಟ್ಟಿಲೇರಿರುವ ಕೇವಲ 34 ಅಭ್ಯರ್ಥಿಗಳಿಗೆ ಮಾತ್ರ ಅತಿಕಡಿಮೆ ಸಮಯ ನೀಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿರುವುದು ಉಳಿದ 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುತ್ತದೆ. 34 ಅಭ್ಯರ್ಥಿಗಳು, ಸಾಮಾಜಿಕ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು, ಆದರೆ ಘನನ್ಯಾಯಾಲಯ ಕೇವಲ 34 ಅಭ್ಯರ್ಥಿಗಳಿಗೆ ಅತಿ ಕಡಿಮೆ ಸಮಯ ನೀಡಿ ಅರ್ಜಿಸಲ್ಲಿಸಲು ಅವಕಾಶ ಮಾಡಿ ಕೇವಲ 8 ದಿನದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಟ್ಟಿದಕ್ಕೆ ಅವಕಾಶ ಪಡೆದ ಕೆಲವು ಅಭ್ಯರ್ಥಿಗಳು ಪರೀಕ್ಷೆ ಬರೆಯದಿರಲು ನಿರ್ಧಾರ ಮಾಡಿದ್ದಾರೆ. ಆದುದರಿಂದ, ಮರು ಪರೀಕ್ಷೆಗೆ ಆದೇಶ ಹೊರಡಿಸಿ ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ 70 ಸಾವಿರ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ.

Exit mobile version