ಬೆಳಗಾವಿ: ಭ್ರಷ್ಟಾಚಾರಕ್ಕಾಗಿಯೇ ಬದುಕಿರುವ ಕಾಂಗ್ರೆಸ್ ಪಕ್ಷ ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡ, ರೈತರು, ಮಧ್ಯಮವರ್ಗದ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬುಧವಾರ ಇಲ್ಲಿನ ಗೋವಾವೇಸ್ ಪಾಲಿಕೆ ಕಾಂಪ್ಲೆಕ್ಸ್ ಬಳಿ ಬಿಜೆಪಿಯಿಂದ ಹಮ್ಮಿಕೊಳ್ಳಲಾದ ಎರಡನೇ ಜನಾಕ್ರೋಶ ಯಾತ್ರೆಯ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ಆಡಳಿತ ನಡೆಸಿದೆಯೋ ಅಲ್ಲೆಲ್ಲಾ ಭ್ರಷ್ಟಾಚಾರ ತಾಂಡವವಾಡುತ್ತಾ ಬಂದಿದೆ. ಈಗ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೇ ಮುಂದುವರೆಸಿಕೊಂಡು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಹಿಂದೂಗಳಿಗೆ ಅವಮಾನ ಮಾಡುತ್ತಿದೆ. ಭ್ರಷ್ಟಾಚಾರ ಮಿತಿಮೀರಿದೆ. ಅಭಿವೃದ್ಧಿ ಕಾರ್ಯಗಳಿಗೆ ಗರ ಬಡಿದಿದೆ. ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಮುಸ್ಲಿಮರ ತುಷ್ಟೀಕರಣ ಮುಂದುವರೆಸುವ ಮೂಲಕ ಉಳಿದ ಎಲ್ಲಾ ಸಮುದಾಯಗಳನ್ನು ಕಡೆಗಣಿಸುತ್ತಿದ್ದಾರೆ. ಹಿಂದೂ ವಿರೋಧಿ ನಿಲುವು ತಾಳಿರುವ ಸಿದ್ದರಾಮಯ್ಯ, ಮುಸ್ಲಿಮರ ಮುಖ್ಯಮಂತ್ರಿ ಆಗಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಜಾತಿ ಗಣತಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಿದರೆ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಕಾಂಗ್ರೆಸ್ ಕುತಂತ್ರ ಮಾಡಿದೆ. ಕುರ್ಚಿ ಉಳಿಸಿಕೊಳ್ಳಲು ಬಡಿದಾಡುತ್ತಿರುವ ಸಿದ್ದರಾಮಯ್ಯ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದರು.
ಎಲ್ಲ ಕಡೆ ಜನಾಕ್ರೋಶ ಹೆಚ್ಚಾಗಿದೆ. ೨೦೨೮ರಲ್ಲಿ ಕಾಂಗ್ರೆಸ್ ಪಕ್ಷ ಮನೆಗೆ ಹೋಗುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ ಭವಿಷ್ಯ ನುಡಿದರು. ಸಿದ್ದರಾಮಯ್ಯರನ್ನು ಇಳಿಸಬೇಕೆಂದು ಕೆಲವರು, ಇನ್ನೂ ಕೆಲವರು ಮುಂದುವರೆಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಹಾವು ಏಣಿ ಆಟ ನಡೆಯುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ವ್ಯಂಗವಾಡಿದರು.