Home ನಮ್ಮ ಜಿಲ್ಲೆ ಚಿತ್ರದುರ್ಗ ಭೀಕರ ಅಪಘಾತ: 3 ಮಕ್ಕಳು ಸೇರಿ ನಾಲ್ವರ ದುರ್ಮರಣ

ಭೀಕರ ಅಪಘಾತ: 3 ಮಕ್ಕಳು ಸೇರಿ ನಾಲ್ವರ ದುರ್ಮರಣ

0

ಚಿತ್ರದುರ್ಗ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.
ಮೃತರನ್ನು ಲಿಂಗಪ್ಪ (26), ಸಿಂಧುಶ್ರೀ (2), ಐದು ತಿಂಗಳ ಅಯ್ಯಳಪ್ಪ ಹಾಗೂ ಮೂರು ತಿಂಗಳ ರಕ್ಷಾ ಎಂದು ಗುರುತಿಸಲಾಗಿದೆ. ಯಲ್ಲಮ್ಮ (30), ಮಲ್ಲಮ್ಮ (20) ಹಾಗೂ ನಾಗಪ್ಪ (35) ಗಂಭೀರವಾಗಿ ಗಾಯಗೊಂಡಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ದಂಡಮ್ಮನಹಳ್ಳಿ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಕುಟುಂಬದ ಇವರು ದೇವದುರ್ಗದಿಂದ ಬುಧವಾರ ರಾತ್ರಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಚಳ್ಳಕೆರೆ ಸಮೀಪ ಚಾಲಕನಿಗೆ ನಿದ್ದೆಯ ಮಂಪರು ಶುರುವಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಗೆ ಅಪ್ಪಳಿಸಿದೆ. ಅತಿ ವೇಗವಾಗಿದ್ದರಿಂದ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಚಳ್ಳಕೆರೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Exit mobile version