Home News ಭಂಡಾರಕೇರಿ ಮಠದ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

ಭಂಡಾರಕೇರಿ ಮಠದ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

ಬೆಳಗಾವಿಯಲ್ಲಿ ಮೇ 9ರಂದು ಪ್ರಶಸ್ತಿ ಪ್ರದಾನ

ಉಡುಪಿ: ಶ್ರೀ ಭಂಡಾರಕೇರಿ ಮಠ (ಭಾಗವತಾಶ್ರಮ) ಕೊಡಮಾಡುವ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ (ಓಆರ್‌ಐ) ಸೇರಿದಂತೆ ಹಿರಿಯ ವಿದ್ವಾಂಸರಾದ ಪರ್ಕಳ ವೆಂಕಟೇಶ ಬಾಯರಿ, ಬೆಳಗಾವಿಯ ಕಟ್ಟಿ ಪ್ರಮೋದಾಚಾರ್ಯ ಮತ್ತು ಮಂತ್ರಾಲಯದ ಶಶಿಧರ ಆಚಾರ್ಯ ಕಡಪ ಭಾಜನರಾಗಿದ್ದಾರೆ.
ಭಾರತೀಯ ವಿದ್ಯೆ, ವೇದಶಾಸ್ತ್ರ, ಸಂಸ್ಕೃತಿ, ತಾಳೆಗರಿ ಮತ್ತು ಪರಂಪರೆಗಳನ್ನು ಸಂರಕ್ಷಿಸಿ, ಪೋಷಿಸಿ ಅಭಿವೃದ್ಧಿಪಡಿಸಲು ಗಣನೀಯವಾಗಿ ಶ್ರಮಿಸುತ್ತಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ವೇದಪೀಠ ಪ್ರಶಸ್ತಿ (1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ) ಘೋಷಿಸಲಾಗಿದೆ.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲೇ ವೇದಾಧ್ಯಯನ ಮಾಡಿ ಅಲ್ಲೇ 50 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ವಾಂಸ, ಸಂಶೋಧಕ ಮತ್ತು ಗ್ರಂಥಕರ್ತ ಪರ್ಕಳ ವೆಂಕಟೇಶ ಬಾಯರಿ ಅವರು ‘ಶ್ರೀ ಸತ್ಯತೀರ್ಥ ಅನುಗ್ರಹ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬಯಿ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ವೇದ, ಶಾಸ್ತ್ರ ಅಧ್ಯಯನ ಮಾಡಿ ಬೆಳಗಾವಿಯಲ್ಲಿ ಪಾಠ-ಪ್ರವಚನ ಮತ್ತು ಪೌರೋಹಿತ್ಯ ಸೇವೆಯಲ್ಲಿ 5 ದಶಕದಿಂದ ಅಹರ್ನಿಸಿ ಸೇವೆ ಮಾಡಿರುವ, ವಿಶ್ವ ಮಧ್ವ ಮಹಾಪರಿಷತ್ ಸಂಚಾಲಕರೂ ಆಗಿರುವ ಪಂಡಿತ ಕಟ್ಟಿ ಪ್ರಮೋದಾಚಾರ್ಯ ಅವರಿಗೆ ‘ಶ್ರೀ ರಾಜವಿದ್ಯಾಮಾನ್ಯ’ ಪ್ರಶಸ್ತಿ ಪ್ರಕಟಿಸಲಾಗಿದೆ.
ರಾಜಹಂಸ ಪ್ರಶಸ್ತಿ: ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಈ ಬಾರಿ ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶಶಿಧರ ಆಚಾರ್ಯ ಕಡಪ ಆಯ್ಕೆ ಗೊಂಡಿದ್ದಾರೆ. ಈ ಮೂರೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
9ರಂದು ಪ್ರದಾನ:
ಬೆಳಗಾವಿಯ ಕೆ.ಕೆ. ವೇಣುಗೋಪಾಲ ಸಭಾಂಗಣದಲ್ಲಿ ಮೇ 9ರಂದು ಸಂಜೆ 4ಕ್ಕೆ ಶ್ರೀ ಮಠ, ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕಸಭಾ, ಶ್ರೀ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜನೆ ಮಾಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 82ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 25ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಾರಂಭದ ಸಾನ್ನಿಧ್ಯವನ್ನು ಉಡುಪಿ ಪೇಜಾವರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ವಿದುಷಿ ಶುಭಾ ಸಂತೋಷ, ಪಂಡಿತ ಬದರೀನಾಥಾಚಾರ್ಯ, ಶ್ರೀನಿಧಿ ವಾಸಿಷ್ಠ ಹಾಜರಿರುತ್ತಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸ್ಥಾನ ಪೂಜೆ-ಗೋಷ್ಠಿ: 9ರಂದು ಬೆಳಗ್ಗೆ 5ಕ್ಕೆ ಬೆಳಗಾವಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ವೇದವ್ಯಾಸ ಜಯಂತಿ ಅಂಗವಾಗಿ ವೇದವ್ಯಾಸ ಮಂತ್ರ ಹೋಮ, ಪೇಜಾವರ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಯವರಿಂದ ಸಂಸ್ಥಾನ ಪೂಜೆ, ಬೆಳಗ್ಗೆ 11ಕ್ಕೆ ವೇದ ಶಾಸ್ತ್ರ ವಿನೋದ ಗೋಷ್ಠಿ, ಮಧ್ಯಾಹ್ನ 2.30ಕ್ಕೆ ವಸಂತ ಪೂಜೆ ನೆರವೇರಲಿದೆ.

Exit mobile version