ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ನೋಂದಣಿಯಾಗುವ ಕಾರುಗಳ ಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಕಾರುಗಳು ಬೆಂಗಳೂರಿನಲ್ಲೇ ನೋಂದಣಿಯಾಗುತ್ತಿದ್ದು ಕಾರುಗಳ ನೋಂದಣಿಯ ರಾಜಧಾನಿಯಾಗಿದೆ..!
ಸಾರಿಗೆ ಇಲಾಖೆಯ ನೋಂದಣಿ ದತ್ತಾಂಶದ ಪ್ರಕಾರ ಬೆಂಗಳೂರಿನಲ್ಲಿ ೨೦೨೪-೨೫ನೇ ಸಾಲಿನಲ್ಲಿ ಹೊಸದಾಗಿ ೭.೨೨ ವಾಹನಗಳು ನೋಂದಾಯಿಸಲ್ಪಟ್ಟಿದ್ದು ಆ ಪೈಕಿ ೪.೬೮ ಲಕ್ಷ ದ್ವಿಚಕ್ರ ವಾಹನಗಳಾದರೆ, ೧.೪೫ ಲಕ್ಷ ಕಾರುಗಳಾಗಿವೆ ಎಂದು ತಿಳಿದುಬಂದಿದೆ.
೨೦೨೦-೨೧ನೇ ಸಾಲಿನಲ್ಲಿ ಬೆಂಗಳೂರಿನಲ್ಲಿನ ನೋಂದಾಯಿತ ವಾಹನಗಳ ಸಂಖ್ಯೆ ಒಂದು ಕೋಟಿ ಇದ್ದುದು ೨೦೨೧-೨೨ರಲ್ಲಿ ೧.೦೪ ಕೋಟಿಗೆ ಏರಿತ್ತು. ಆನಂತರ ೨೦೨೨-೨೩ರಲ್ಲಿ ೧.೦೯ ಕೋಟಿಗೆ ಜಿಗಿದ ವಾಹನಗಳ ಸಂಖ್ಯೆ ೨೦೨೩-೨೪ರಲ್ಲಿ ೧.೧೬ ಕೋಟಿಗೆ ಏರಿತ್ತು. ಇದೀಗ ೨೦೨೪-೨೫ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆಯಲ್ಲಿ ಶೇ.೬.೫ರಷ್ಟು ಏರಿಕೆಯಾಗಿದ್ದು ಒಟ್ಟು ವಾಹನಗಳ ಸಂಖ್ಯೆ ೧.೨೩ ಕೋಟಿಗೆ ಮುಟ್ಟಿದೆ.
ನಿತ್ಯ ೨೦೦೦ ವಾಹನಗಳು
ಸಾರಿಗೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ನಿತ್ಯ ೨೦೦೦ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿದ್ದು ಮಾಸಿಕ ೬೦ ಸಾವಿರ ಗಡಿ ದಾಟಿದೆ. ಆ ಪೈಕಿ ಅತಿ ಹೆಚ್ಚು ೭೬,೫೦೯ ವಾಹನಗಳು ಅಕ್ಟೋಬರ್‌ನಲ್ಲೇ ನೋಂದಣಿಯಾಗುತ್ತಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ವಾಹನ ಸಂಸ್ಥೆಗಳು ನೀಡುವ ರಿಯಾಯಿತಿಗಳು ಈ ಖರೀದಿಗೆ ಏರಿಕೆಗೆ ಕಾರಣವೆನ್ನಲಾಗಿದೆ. ಅಂತೆಯೇ ಡಿಸೆಂಬರ್‌ನಲ್ಲಿ ಅತಿ ಕಡಿಮೆಯೆನ್ನಲಾದ ೪೨, ೫೨೦ ವಾಹನಗಳು ನೋಂದಾಯಿಸ್ಪಡುತ್ತಿವೆ. ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳುವಂತೆ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಳದಿಂದಾಗಿ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದ್ದು ವಾಹನ ಸವಾರರಿಗೆ ದಿನೇ ದಿನೇ ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಿ ಒಂದೆಡೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ರಸ್ತೆಗಳು ವಿಸ್ತಾರಗೊಳ್ಳದೇ, ಮೂಲಭೂತ ಸೌಕರ್ಯಗಳು ವೃದ್ಧಿಸದೇ ಸಮಸ್ಯೆ ಉಲ್ಬಣವಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ೨೦೨೩-೨೪ರಲ್ಲಿ ರಾಜಧಾನಿಯಲ್ಲಿ ಪ್ರತಿ ಕಿಲೋಮೀಟರ್ ರಸ್ತೆಯಲ್ಲಿ ೭೬೧ ವಾಹನಗಳು ಸಂಚರಿಸುತ್ತಿದ್ದರೆ, ಇದೀಗ ೨೦೨೪-೨೫ರಲ್ಲಿ ವಾಹನಗಳ ಸಂಖ್ಯೆ ೮೨೩ಕ್ಕೆ ಏರಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ವಾಹನಗಳು ಅದೇ ಕಿರಿದಾದ ರಸ್ತೆಗಳಲ್ಲೇ ಸಂಚರಿಸಬೇಕಾಗಿದ್ದು ಸಂಚಾರ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗುತ್ತಿವೆ.
