ಬಾಗಲಕೋಟೆ: ಬಿಸಿಲುನಾಡಿನಲ್ಲಿ ಸೇಬು ಬೆಳೆದು ಸಾಧನೆ ಮಾಡಿದ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಪ್ರಗತಿಪರ ರೈತರ ಶ್ರೀಶೈಲ ತೇಲಿ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ಕೊಂಡಾಡಿದ್ದಾರೆ.
ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು ಎಂಬ ಭ್ರಮೆಯನ್ನು ಸುಳ್ಳಾಗಿಸಿರುವ ಶ್ರೀಶೈಲ ತೇಲಿ ಅವರು ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳದು ೧೫ ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.
ಈ ಕುರಿತು ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಅವರು, ನಾನು ಆರಂಭದಲ್ಲಿ ಸೇಬು ಬೆಳೆಯಲು ಮುಂದಾದಾಗ ಜನ ನನ್ನ ಹುಚ್ಚ ಎಂದಿದ್ದರು, ಆದರೆ ಭರಪೂರ ಬೆಳೆ ತೆಗೆದು ತೋರಿಸಬೇಕೆಂದು ಪಣ ತೊಟ್ಟಿದ್ದೆ ಅದರಂತೆ ಸೇಬು ಬೆಳೆದು ತೋರಿಸಿದ್ದೇನೆ. ಮೋದಿ ಅವರು ನನ್ನ ಸಾಧನೆ ಗುರುತಿಸಿ ದೇಶವ್ಯಾಪಿ ನನ್ನ ಪರಿಚಯಿಸಿರುವುದು ಜನ್ಮಸಾರ್ಥಕ ಎನಿಸಿದೆ ಎಂದರು.