ಹುಬ್ಬಳ್ಳಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಬಿಜೆಪಿಯವರು ರಾಜಕೀಯಕ್ಕೋಸ್ಕರ ಮಾಡಿರುವ ಆರೋಪ. ಲೋಕಾಯುಕ್ತರು ವಿಚಾರಣೆಗೆ ಕರೆದಿದ್ದರು. ಮುಖ್ಯಮಂತ್ರಿಗಳು ಹಾಜರಾಗಿದ್ದಾರೆ. ತನಿಖೆ ಆಗಲಿ ತಪ್ಪೇನಿದೆ? ಮುಖ್ಯಮಂತ್ರಿಯವರ ಪಾತ್ರವಂತೂ ಏನೂ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರರೊಂದಿಗೆ ಮ್ಯಾಚ್ ಫಿಕ್ಸಿಂಗ್ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಅವರ ಅಧಿಕಾರ ಅವಧಿಯಲ್ಲೂ ಲೋಕಾಯುಕ್ತಕ್ಕೆ ಪ್ರಕರಣಗಳನ್ನು ಕೊಡಲಾಗಿತ್ತು. ಆವಾಗ ಮ್ಯಾಚ್ ಫಿಕ್ಸಿಂಗ್ ಆಗಿತ್ತಾ? ಎಂದು ಜಮೀರ್ ಪ್ರಶ್ನಿಸಿದರು.
ನನ್ನ ವಿರುದ್ಧವೂ ಸಿಬಿಐಗೆ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದೆ. ಕೇವಲ ೨ ಗಂಟೆಯಲ್ಲಿ ವಿಚಾರಾಧಿಕಾರಿಗಳು ವಿಚಾರಣೆ ನಡೆಸಿ ಕಳಿಸಿದರು. ವಿಚಾರಣೆ ಎಂಬುದು ತನಿಖಾಧಿಕಾರಿಗಳ ಮೇಲೆ ಇರುತ್ತದೆ. ವಿಚಾರಣೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಬಾರದು ಎಂದು ಜಮೀರ್ ಅಹ್ಮದ್ ಹೇಳಿದರು.